ಕಾಂಗ್ರೆಸ್-ಜೆಡಿಎಸ್ ದೋಸ್ತಿ ಹೈಡ್ರಾಮಾ, ಸದ್ಯಕ್ಕೆ ಸೈಲೆಂಟ್ ಆಗಿರಲು ಮುಂದಾದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

MB-Patil-CM-Kumaraswamy

ಬೆಂಗಳೂರು, ಜೂ.9- ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತವನ್ನು ಪ್ರತಿಪಕ್ಷ ಬಿಜೆಪಿ ಕಾದು ನೋಡುತ್ತಿದ್ದು , ಸದ್ಯಕ್ಕೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಎರಡೂ ಪಕ್ಷಗಳಲ್ಲಿ ನಡೆಯತ್ತಿರುವ ಶೀತಲ ಸಮರವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ನಾಯಕರು ಅತೃಪ್ತ ಶಾಸಕರ ಸಂಪರ್ಕದಿಂದ ದೂರ ಇರಲು ತೀರ್ಮಾನಿಸಿದ್ದಾರೆ. ಯಾವ ಸಂದರ್ಭದಲ್ಲೂ ಅವರ ಜೊತೆ ಮಾತುಕತೆ ನಡೆಸುವುದಾಗಲಿ ಇಲ್ಲವೇ ಪಕ್ಷಕ್ಕೆ ಆಹ್ವಾನಿಸುವುದು ಸೇರಿದಂತೆ ಯಾವುದೇ ರೀತಿಯ ಚಟವಟಿಕೆಗಳನ್ನು ನಡೆಸದೆ ರಚನಾತ್ಮಕವಾಗಿ ಕೆಲಸ ಮಾಡಬೇಕೆಂದು ವರಿಷ್ಠರು ಸೂಚಿಸಿದ್ದಾರೆ.

ಎಂಥದೇ ಸಂದರ್ಭದಲ್ಲೂ ನೀವು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಬೇಡಿ. ಉಭಯ ಪಕ್ಷಗಳಲ್ಲಿ ಇನ್ನು ಸಾಕಷ್ಟು ಬೆಳವಣಿಗೆಗಳು ನಡೆಯಲಿವೆ. ಎರಡೂ ಪಕ್ಷಗಳಲ್ಲಿ ಸಂಬಂಧ ಹಳಸಿ ಶಾಸಕರೇ ಹೊರಬರುವವರೆಗೂ ನೀವು ಯಾವುದೇ ರೀತಿಯ ಲಾಭ ಪಡೆಯುವ ಪ್ರಯತ್ನಕ್ಕೆ ಮುಂದಾಗಬಾರದು ಎಂದು ಸೂಚಿಸಿದ್ದಾರೆ.

ಏನೇ ಶತಪ್ರಯತ್ನ ನಡೆಸಿದರೂ ಈ ಸರ್ಕಾರ ಐದು ವರ್ಷ ಪೂರೈಸುವುದಿಲ್ಲ. ಹೆಚ್ಚೆಂದರೆ ಲೋಕಸಭೆ ಚುನಾವಣೆವರೆಗೂ ಮಾತ್ರ ಸರ್ಕಾರ ಮುಂದುವರೆಯಬಹುದು. ಅನಗತ್ಯವಾಗಿ ನೀವು ಮೂಗು ತೂರಿಸುವ ಕೆಲಸ ಮಾಡಿದರೆ ಪಕ್ಷಕ್ಕೆ ಹಾನಿಯಾಗುತ್ತದೆ. ಈಗಾಗಲೇ ಎರಡೂ ಪಕ್ಷಗಳಲ್ಲಿ ಪರಸ್ಪರ ನಂಬಿಕೆ, ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ.  ಇನ್ನು ಖಾತೆ ಹಂಚಿಕೆ ಸೇರಿದಂತೆ ಕೆಲವು ಪ್ರಮುಖ ನಿರ್ಧಾರಗಳಲ್ಲೂ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಕಾಣುತ್ತಿಲ್ಲ.ಪರಸ್ಪರ ವಿರುದ್ಧ ದಿಕ್ಕಿಗೆ ಹೋಗುತ್ತಿರುವ ಈ ಸರ್ಕಾರ ಹೆಚ್ಚು ದಿನ ಉಳಿಯುವುದು ಖಾತ್ರಿ ಇಲ್ಲ. ವಿಧಾನಸಭೆಯ ಹೊರಗೆ ಮತ್ತು ಒಳಗೆ ನೀವು ರಚನಾತ್ಮಕವಾಗಿ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.

ಪಕ್ಷದ ಅಧ್ಯಕ್ಷರು ಹಾಗೂ ಮುಖಂಡರನ್ನು ಹೊರತುಪಡಿಸಿ ಉಳಿದವರ್ಯಾರು ಹೇಳಿಕೆ ನೀಡುವ ಅಗತ್ಯವಿಲ್ಲ. ಒಬ್ಬೊಬ್ಬರು ಒಂದು ರೀತಿಯ ಹೇಳಿಕೆ ನೀಡುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ. ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರು ಹಾಗೂ ಅಧಿಕೃತ ಪಕ್ಷದ ವಕ್ತಾರರು ಹೊರತುಪಡಿಸಿ ಉಳಿದವರು ಪಕ್ಷದ ನಿಲುವು ಹಾಗೂ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಇರುವವರು ಹೊರಬರುವುದರಲ್ಲಿ ಯಾವುದೇ ಅನುಮಾನ ಬೇಡ. ನಾವು ಈಗ ಮಧ್ಯಪ್ರವೇಶಿಸಿದರೆ ಇಡೀ ಚಿತ್ರಣವನ್ನೇ ಬಿಜೆಪಿ ಮೇಲೆ ತಿರುಗಿಸುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಎರಡೂ ಪಕ್ಷಗಳ ಬೆಳವಣಿಗೆಗಳನ್ನು ಗಮನಿಸಬೇಕು. ಸದ್ಯಕ್ಕೆ ಕಾದು ನೋಡುವ ತಂತ್ರವನ್ನಷ್ಟೇ ಮಾಡಿ ಎಂದು ಸೂಚಿಸಿದ್ದಾರೆ.

Facebook Comments

Sri Raghav

Admin