ಗೌರಿ ಹಂತಕರನ್ನು ಆದಷ್ಟು ಬೇಗ ಬಂಧಿಸುವಂತೆ ಡಿಸಿಎಂ ಹಾಗೂ ಗೃಹ ಸಚಿವ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಜೂ.9- ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಗೃಹ ಇಲಾಖೆ ವಹಿಸಿಕೊಂಡ ನಂತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹಾಗೂ ಕಲ್ಬುರ್ಗಿ ಹತ್ಯೆ ತನಿಖೆ ವಿವರ ಒದಗಿಸುವಂತೆ ಸಭೆಯಲ್ಲಿ ಕೇಳಲಾಯಿತು. ಇದಕ್ಕೆ ಸಂಬಂಧಿಸಿದ ಕೆಲವೊಂದು ವಿವರವನ್ನು ಅಧಿಕಾರಿಗಳು ನೀಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಒದಗಿಸುವುದಾಗಿ ಪೊಲೀಸರು ಹೇಳಿದ್ದಾರೆ ಎಂದರು.

ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಸೂಚಿಸಿದ್ದೇನೆ. ಅದರೊಂದಿಗೆ ಪೊಲೀಸ್ ಇಲಾಖೆ ಮುಂದಿರುವ ಹಲವಾರು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಬೆಂಗಳೂರಿನ ಹಲವೆಡೆ ಇರುವ ಸಂಚಾರಿ ದಟ್ಟಣೆ ಸಮಸ್ಯೆ, ಅಪರಾಧ ಪ್ರಕರಣಗಳನ್ನು ತಗ್ಗಿಸುವುದು, ಅಪರಾಧ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಜೂ.16ರ ನಂತರ ಮತ್ತೆ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ವಿಭಾಗವಾರು ಸಭೆ ನಡೆಸಿ, ಸಮಗ್ರವಾಗಿ ಇಲಾಖೆ ಸುಧಾರಣೆ ಕುರಿತಂತೆ ಚರ್ಚಿಸಲಾಗುವುದು ಎಂದು ಹೇಳಿದರು. ಬೆಂಗಳೂರು ನಗರಾಭಿವೃದ್ದಿ ಸಂಬಂಧ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ರಜಾದಿನವಾದ ಇಂದು ಸಂಜೆ ಬಿಡಿಎ, ಬಿಡಬ್ಲ್ಯೂಎಸ್‍ಎಸ್‍ಬಿ, ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಬೆಂಗಳೂರಿನ ನಾಗರಿಕರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಇಂದು ನಡೆದಿರುವುದು ಆರಂಭಿಕ ಸಭೆ. ಮುಂದಿನ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯಲಿದೆ ಎಂದು ಹೇಳಿದರು. ಸಭೆಯಲ್ಲಿ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಐಜಿ-ಡಿಜಿಪಿ ನೀಲಮಣಿ ರಾಜು, ಡಿಜಿಪಿಗಳಾದ ಎಚ್.ಸಿ.ಕಿಶೋರ್ ಚಂದ್ರ, ಎಂ.ಎನ್.ರೆಡ್ಡಿ , ಎ.ಎಂ.ಪ್ರಸಾದ್, ಪಿ.ಕೆ.ಗರ್ಗ್, ಪ್ರವೀಣ್ ಸೂದ್, ಎಡಿಜಿಪಿಗಳಾದ ಅಲೋಕ್ ಮೋಹನ್, ಪರಶಿವಮೂರ್ತಿ, ಕಮಲ್‍ಪಂತ್,ಎಂ.ಎ.ಸಲೀಂ, ಆರ್.ಪಿ.ಶರ್ಮ, ರಾಘವೇಂದ್ರ ಔರಾದ್ಕರ್, ಪ್ರತಾಪ್ ರೆಡ್ಡಿ , ಅಮರ್‍ಕುಮಾರ್ ಪಾಂಡೆ, ಮಾಲಿನಿ ಕೃಷ್ಣಮೂರ್ತಿ, ಪಿ.ಕೆ.ಠಾಕೂರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್, ಐಜಿಪಿಗಳಾದ ಉಮೇಶ್‍ಕುಮಾರ್, ಹರಿಶೇಖರ್, ಬಿ.ಕೆ.ಸಿಂಗ್, ನಂಜುಂಡಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin