ಹುಷಾರ್, ಎಸಿ ಕಾರಲ್ಲಿ ಯಾಮಾರಿದರೆ ಸಾವು ಗ್ಯಾರಂಟಿ…!

ಈ ಸುದ್ದಿಯನ್ನು ಶೇರ್ ಮಾಡಿ

AC-Car--01

ಬೆಂಗಳೂರು, ಜೂ.9- ಹವಾನಿಯಂತ್ರಿತ ಕಾರುಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು, ನಿದ್ರಿಸುವ ಮುನ್ನ ಎಚ್ಚರ ವಹಿಸದಿದ್ದರೆ ಎಸಿಯಿಂದ ಹೊರಸೂಸುವ ಕಾರ್ಬನ್ ಮೋನಾಕ್ಸೈಡ್ ವಿಷವಾಗಿ ಪರಿವರ್ತನೆಗೊಂಡು ಉಸಿರುಗಟ್ಟಿ ಸಾವು ಸಂಭವಿಸಬಹುದು. ಹೀಗಾಗಿ ಇರಲಿ ಎಚ್ಚರ..! ಎಸಿ ಕಾರಿನಲ್ಲಿ ಉಸಿರುಗಟ್ಟಿ ಈಗಾಗಲೇ ಹಲವಾರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ಹೆಚ್ಚು ಮಕ್ಕಳೇ ಬಲಿಯಾಗಿರುವುದರಿಂದ ಪೋಷಕರು ತಮ್ಮ ಕಂದಮ್ಮಗಳ ರಕ್ಷಣೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಇತ್ತೀಚೆಗೆ ಅನ್ನಪೂರ್ಣೇಶ್ವರಿನಗರದಲ್ಲಿ ಕಾರು ಮಾರುವ ಏಜೆಂಟ್ ಹಾಗೂ ಆತನ ಗೆಳತಿ ಕಾರಿನಲ್ಲೇ ಉಸಿರುಗಟ್ಟಿ ದುರಂತ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಾರಿನ ಎಸಿಯಿಂದ ಹೊರಬಂದ ಕಾರ್ಬನ್ ಮೋನಾಕ್ಸೈಡ್ ವಿಷವಾಗಿ ಪರಿವರ್ತನೆಗೊಂಡಿದ್ದೇ ಕಾರಣ ಎನ್ನಲಾಗಿದೆ.

ಉಸಿರುಗಟ್ಟುವುದು ಹೇಗೆ?

ಕಾರ್ ಡೋರ್ ಕ್ಲೋಸ್ ಮಾಡಿ ಎಸಿ ಆನ್ ಮಾಡಿದಾಗ ಹೊರಬರುವ ಗಾಳಿ ಹೊರಹೋಗಲು ಸಾಧ್ಯವಿಲ್ಲದೆ ಆವರಣದಲ್ಲೇ ಸುತ್ತುಹಾಕಿ ಅದರಿಂದ ಕಾರ್ಬನ್ ಮೋನಾಕ್ಸೈಡ್ ಉತ್ಪತ್ತಿಯಾಗಿ ಅದು ವಿಷವಾಗಿ ಪರಿವರ್ತನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾರಿನಲ್ಲಿರುವವರಿಗೆ ಉಸಿರಾಡಲು ಸಾಧ್ಯವಾಗದೆ ಸಾವು ಉಂಟಾಗುತ್ತದೆ.

ಎಸಿ ಕಾರಿನಲ್ಲಿ ನಿದ್ರಿಸುವವರಿಗೆ ಉಸಿರುಗಟ್ಟಿದ ಅನುಭವವಾದ ಕೂಡಲೇ ಡೋರ್ ತೆಗೆದು ಹೊರಬರಬೇಕು. ಇಲ್ಲದಿದ್ದಲ್ಲಿ ಕ್ಷಣ ಮಾತ್ರದಲ್ಲೇ ಉಸಿರಾಟ ಸಾಧ್ಯವಾಗದೆ ಸಾವಿನ ಮನೆಯ ಕದ ತಟ್ಟುವ ಪರಿಸ್ಥಿತಿ ಎದುರಾಗುತ್ತದೆ. ಕಾರಿನ ಎಸಿಯಿಂದ ಹೊರಬರುವ ಕಾರ್ಬನ್ ಮೋನಾಕ್ಸೈಡ್ ವಿಷಯುಕ್ತವಾಗಿದ್ದರೂ ಅದರ ವಾಸನೆ ಬದಲಾವಣೆಯಾಗುವುದಿಲ್ಲ. ಹೀಗಾಗಿ ಕಾರಿನಲ್ಲಿರುವವರಿಗೆ ನಾವು ವಿಷಯುಕ್ತ ಗಾಳಿ ಸೇವಿಸುತ್ತಿದ್ದೇವೆ ಎಂಬ ಭಾವನೆಯೇ ಬರುವುದಿಲ್ಲ. ಆದರೆ, ಮನುಷ್ಯನ ಶ್ವಾಸಕೋಶ ಸೇರುವ ಕಾರ್ಬನ್ ಮೋನಾಕ್ಸೈಡ್ ಉಸಿರಾಟವನ್ನು ಸ್ತಬ್ಧಗೊಳಿಸುತ್ತದೆ. ಅಂತಹ ಸಂದರ್ಭದಲ್ಲಿ ಎಚ್ಚರಗೊಂಡು ಕಾರಿನ ಡೋರ್ ತೆರೆಯಲು ಸಾಧ್ಯವಾಗದಂತಹ ದುಸ್ಥಿತಿಗೆ ತಲುಪಿ ಸಾವು ಸಂಭವಿಸಬಹುದು.

ಒಂದು ವೇಳೆ ನೀವು ಬಳಸುವ ಕಾರಿನ ಎಸಿ ಲೀಕೇಜ್ ಆದರೂ ಕಾರ್ಬನ್ ಮೋನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಹೀಗಾಗಿ ಕಾರು ಬಳಸುವವರು ತಮ್ಮ ವಾಹನದ ಹವಾ ನಿಯಂತ್ರಣ ವ್ಯವಸ್ಥೆ ಸುಭದ್ರವಾಗಿದೆಯೇ ಎಂಬುದನ್ನು ಕಾಲ ಕಾಲಕ್ಕೆ ಪರಿಶೀಲಿಸಿಕೊಳ್ಳುವ ಅವಶ್ಯಕತೆಯಿದೆ.   ಕಾರಿನ ಎಸಿ ಯಾವುದೇ ಸಂದರ್ಭದಲ್ಲಿ ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆ ಇರುವುದರಿಂದ ರಾತ್ರಿ ಮತ್ತು ಹಗಲು ವೇಳೆ ಕಾರಿನಲ್ಲಿ ನಿದ್ರಿಸಬಾರದು ಎಂದು ಸಲಹೆ ನೀಡುತ್ತಾರೆ ತಜ್ಞರು.

ಎಲ್ಲೆಲ್ಲಿ ಸಾವು:
ಇತ್ತೀಚೆಗೆ ಮಂಗಳೂರಿನ ಪುತ್ತೂರು ಸಮೀಪ ಅನಿವಾಸಿ ಭಾರತೀಯ ಕುಟುಂಬದ ಮಗುವೊಂದು ಕಾರಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿತ್ತು. ದುಬೈ ಮೂಲದ ಇಮ್ರಾನ್ ಮತ್ತು ಶಂಶೇರಾ ದಂಪತಿಯ ಪುತ್ರ ರಹಮತ್ ತಮ್ಮ ಮನೆ ಮುಂಭಾಗದಲ್ಲೇ ಆಟವಾಡುತ್ತ ಕಾರಿಗೆ ಹೋಗಿ ಡೋರ್‍ಲಾಕ್ ಮಾಡಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿತ್ತು. ಅದೇ ರೀತಿ ಕಳೆದ ವರ್ಷ ಚೆನ್ನೈನ ಸಾಫ್ಟ್‍ವೇರ್ ಕಂಪೆನಿಯ ಮಾಲೀಕ ಹಾಗೂ ಆತನ ಇಬ್ಬರು ನೌಕರರು ಕಾರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದರು.

ಸನ್ಸಾರ್ ಟೆಕ್ನಾಲಜಿ ಸಂಸ್ಥೆಯ ಮಾಲೀಕರಾದ ಬಾಲಕೃಷ್ಣನ್ ಅವರು ತನ್ನ ಸಂಸ್ಥೆಯ ಇಬ್ಬರು ನೌಕರರಾದ ಆರ್ಮುಗಂ ಮತ್ತು ಬಾಲಚಂದರ್ ಎಂಬುವವರನ್ನು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಸುರಿಯುತ್ತಿದ್ದ ಮಳೆ ಹನಿ ಕಾರಿನ ಒಳಗೆ ಬೀಳಬಾರದು ಎಂದು ಡೋರ್ ಕ್ಲೋಸ್ ಮಾಡಿಕೊಂಡು ಎಸಿ ಆನ್ ಮಾಡಿದ್ದರು. ಮಳೆ ಹೆಚ್ಚಾದ್ದರಿಂದ ರಸ್ತೆ ಬದಿ ಕಾರು ನಿಲ್ಲಿಸಿಕೊಂಡಿದ್ದಾಗ ಎಸಿ ಲೀಕೇಜ್‍ನಿಂದ ಉತ್ಪತ್ತಿಯಾದ ವಿಷಯುಕ್ತ ಕಾರ್ಬನ್ ಮೋನಾಕ್ಸೈಡ್ ಗಾಳಿ ಸೇವಿಸಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು.

ಪುಣೆಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಅಲ್ಲೇ ನಿಂತಿದ್ದ ಕಾರಿನ ಡೋರ್ ತೆಗೆದು ಒಳ ಪ್ರವೇಶಿಸಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದ. ಈ ಬಾಲಕನ ಸಾವಿಗೆ ಕಳೆದ ಹಲವಾರು ದಿನಗಳಿಂದ ಒಂದೇ ಕಡೆ ನಿಂತಿದ್ದ ಕಾರಿನಲ್ಲಿ ಉತ್ಪತ್ತಿಯಾದ ಶಾಖವೇ ಕಾರಣ ಎನ್ನುವುದು ಪೆÇಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು. ಇನ್ನು ದೆಹಲಿಯಲ್ಲಿ ಮನೆ ಮುಂದೆ ನಿಂತಿದ್ದ ಕಾರಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ತಮ್ಮ ಜೀವ ಕಳೆದುಕೊಂಡಿದ್ದರು. ಇದೇ ರೀತಿ ದೇಶದಾದ್ಯಂತ ಕಾರಿನ ಎಸಿ ಮತ್ತು ಶಾಖದಿಂದ ಉತ್ಪತ್ತಿಯಾಗುವ ಕಾರ್ಬನ್ ಮೋನಾಕ್ಸೈಡ್‍ಗೆ ಹಲವಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ದುರಂತವೆಂದರೆ, ಈಗಲೂ ಜನಸಾಮಾನ್ಯರು ಕಾರು ಎಸಿಯಿಂದ ಎದುರಾಗುವ ತೊಂದರೆ ಬಗ್ಗೆ ಎಚ್ಚರ ವಹಿಸದಿರುವುದು ದುರಂತವೇ ಸರಿ.

ಸಾವು ಸಾಧ್ಯವಿಲ್ಲ:

ಇತ್ತೀಚಿನ ದಿನಗಳಲ್ಲಿ ರಸ್ತೆಗಿಳಿಯುತ್ತಿರುವ ಕಾರುಗಳಲ್ಲಿ ಅತ್ಯಾಧುನಿಕ ವ್ಯವಸ್ಥೆ ಇರುವುದರಿಂದ ಎಸಿ ಸೋರಿಕೆಯಾಗಿ ಕಾರ್ಬನ್ ಮೋನಾಕ್ಸೈಡ್ ಉತ್ಪಾದನೆಯಾಗಲು ಸಾಧ್ಯವೇ ಇಲ್ಲ ಎಂದು ಆಟೋ ಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದುರಂತವೆಂದರೆ, ಅತ್ಯಾಧುನಿಕ ಕಾರುಗಳಲ್ಲೂ ಇತ್ತೀಚಿನ ಕೆಲ ದಿನಗಳಲ್ಲಿ ಹಲವಾರು ಅಮಾಯಕರು ಉಸಿರುಗಟ್ಟಿ ಸಾವನ್ನಪ್ಪುತ್ತಿರುವುದು ವಿಪರ್ಯಾಸವಾಗಿದೆ.

ಇರಲಿ ಎಚ್ಚರ:
ಇಂದಿನ ಯುವ ಪೀಳಿಗೆ ತಮ್ಮ ತಂದೆ-ತಾಯಿಯರಿಗಿಂತ ಅವರು ಬಳಸುವ ಕಾರನ್ನೇ ಹೆಚ್ಚು ಪ್ರೀತಿಸುವುದು. ವೀಕ್ ಎಂಡ್ ಮೋಜು-ಮಸ್ತಿಗಾಗಿ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಲಾಂಗ್‍ಡ್ರೈವ್ ಹೋಗುವುದು. ಅರಣ್ಯ ಪ್ರದೇಶದಲ್ಲಿ ರಾತ್ರಿಯಿಡೀ ತಂಗುವುದು. ಅನಿವಾರ್ಯವಾದರೆ ತಾವು ಇಷ್ಟ ಪಡುವ ಕಾರಿನಲ್ಲೇ ರಾತ್ರಿಯಿಡೀ ಕಾಲ ಕಳೆಯುವುದು ಮಾಮೂಲಾಗಿದೆ. ಇಂತಹ ದಾರಿ ತಪ್ಪಿದ ಯುವ ಜನಾಂಗ ಕಾರಿನ ಎಸಿಯಿಂದ ಸಂಭವಿಸುವ ಅನಾಹುತಗಳ ಬಗ್ಗೆ ಎಚ್ಚರ ವಹಿಸದಿದ್ದರೆ ತಮ್ಮ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಇನ್ನು ಮುಂದಾದರೂ ಕಾರು ಬಳಸುವವರು ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತ.

Facebook Comments

Sri Raghav

Admin