ಎಂ.ಬಿ.ಪಾಟೀಲ್ ಗೆ ಕೆಪಿಸಿಸಿ ಪಟ್ಟ..? ದಿನೇಶ್‍ ಗುಂಡೂರಾವ್‍ಗೆ ಅರ್ಧಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

MB-Patil-Congress

ಬೆಂಗಳೂರು, ಜೂ.9- ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗುವಂತೆ ಹೈಕಮಾಂಡ್ ಮನವೊಲಿಸಲು ಮುಂದಾಗಿದೆ.  ನಿನ್ನೆ ನಡೆದ ಸಂಧಾನ ಪ್ರಕ್ರಿಯೆ ಸಭೆಗಳು ವಿಫಲವಾದ ಬೆನ್ನಲ್ಲೇ ಎಂ.ಬಿ.ಪಾಟೀಲ್ ದೆಹಲಿಗೆ ತೆರಳಿದ್ದು, ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮತ್ತೊಂದು ಡಿಸಿಎಂ ಸ್ಥಾನ ಅಸಾಧ್ಯ ಎಂದು ಖಡಕ್ಕಾಗಿ ಹೇಳಿರುವ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರಾಗುವಂತೆ ಮನವೊಲಿಸುತ್ತಿದೆ.  ಉಪಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಖಾತೆಗಳು ಹಳೆ ಮೈಸೂರು ಭಾಗಕ್ಕೆ ಸೇರಿದ್ದು, ಸಮಾಜ ಕಲ್ಯಾಣ ಹೊರತುಪಡಿಸಿ ಇನ್ಯಾವ ಖಾತೆಗಳು ಉತ್ತರ ಕರ್ನಾಟಕ ಭಾಗಕ್ಕೆ ಸಿಕ್ಕಿಲ್ಲ. ಈ ಕೊರತೆಯನ್ನು ನೀಗಿಸಲು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂ.ಬಿ.ಪಾಟೀಲ್‍ಗೆ ನೀಡಿ ಪ್ರಾದೇಶಿಕ ಅಸಮತೋಲನ ನಿಭಾಯಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.

ಬಂಡಾಯದ ಬಾವುಟ ಹಾರಿಸಿರುವ ಎಂ.ಬಿ.ಪಾಟೀಲ್ ಜೊತೆ ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್ , ರೋಷನ್‍ಬೇಗ್, ಲಕ್ಷ್ಮಿ ಹೆಬ್ಬಾಳ್ಕರ್, ಬಿ.ಸಿ.ಪಾಟೀಲ್ ಸೇರಿದಂತೆ ಪ್ರಭಾವಿ ಶಾಸಕರು ಗುರುತಿಸಿಕೊಂಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಜನರು ಎಂ.ಬಿ.ಪಾಟೀಲ್ ಬಣದಲ್ಲಿ ಗುರುತಿಸಿಕೊಂಡಿರುವುದು ಕಾಂಗ್ರೆಸ್‍ಗೆ ಹೊಸ ತಲೆನೋವಾಗಿದೆ.
ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಂತಹ ಮಹತ್ವದ ಹುದ್ದೇಯನ್ನೇ ಎಂ.ಬಿ.ಪಾಟೀಲ್‍ಗೆ ನೀಡಲು ಕಾಂಗ್ರೆಸ್ ಮುಂದಾಗಿದೆ.

ದಿನೇಶ್‍ಗುಂಡೂರಾವ್‍ಗೆ ಅರ್ಧಚಂದ್ರ:
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್ ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಅವಕಾಶ ಸಿಗದಿದ್ದಾಗ ಸಮತೋಲನ ಕಾಯ್ದುಕೊಂಡು ಪಕ್ಷಕ್ಕಾಗಿ ದುಡಿಯುತ್ತಾ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ಸಮರ್ಥರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸಂಪುಟಕ್ಕೆ ಆರ್.ವಿ.ದೇಶಪಾಂಡೆ ಅವರನ್ನು ತೆಗೆದುಕೊಂಡ ನಂತರ ಬ್ರಾಹ್ಮಣ ಸಮುದಾಯಕ್ಕೆ ನಿಡಬೇಕಾಗಿದ್ದ ಸಚಿವ ಸ್ಥಾನ ಕೋಟಾ ಮುಗಿದಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಕೈಬಿಟ್ಟಾಗಲು ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸದೆ ಮೌನವಾಗಿದ್ದರು. ಹೀಗಾಗಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇತ್ತೀಚೆಗೆ ಮೈತ್ರಿ ಸರ್ಕಾರದಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲೂ ಗುಂಡೂರಾವ್ ಅವರನ್ನು ಸಂಪುಟದಿಂದ ಹೊರಗಿಡಲಾಗಿದೆ. ಆದರೂ ಅವರು ಅಸಮಾಧಾನ ವ್ಯಕ್ತಪಡಿಸದೆ ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನಲ್ಲಿ ತೊಡಗಿಕೊಂಡಿದ್ದರು.

ಮೂಲಗಳ ಪ್ರಕಾರ ಹೈಕಮಾಂಡ್ ದಿನೇಶ್ ಗುಂಡೂರಾವ್ ಅವರನ್ನೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಭರವಸೆ ನೀಡಿದೆ ಎಂದು ಹೇಳಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎಂ.ಬಿ.ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಚರ್ಚೆಗಳು ನಡೆಯುತ್ತಿರವುದರಿಂದ ದಿನೇಶ್ ಗುಂಡೂರಾವ್‍ಗೆ ಮತ್ತೆ ತ್ರಿಶಂಕು ಸ್ಥಿತಿ ಎದುರಾಗಿದೆ.

ದೆಹಲಿಯಲ್ಲಿ ಮಹತ್ವದ ಸಭೆ:
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೇರಳದಲ್ಲಿ, ಮತ್ತು ಗುಲಾಂನಬಿ ಅಜಾದ್ ಅವರು ಜಮ್ಮುಕಾಶ್ಮೀರದಲ್ಲಿದ್ದಾರೆ. ನಿನ್ನೆ ಬೆಂಬಲಿಗರ ಜೊತೆ ಚರ್ಚೆ ನಡೆಸಿದ ಎಂ.ಬಿ.ಪಾಟೀಲ್ ಅವರು ದಿಢೀರ್ ದೆಹಲಿಗೆ ಹೋಗುವ ನಿರ್ಧಾರ ತೆಗೆದುಕೊಂಡರು. ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾವಹಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಪಾಟೀಲ್ ಅವರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಎಂ.ಬಿ.ಪಾಟೀಲ್ ದೆಹಲಿ ತಲುಪುತ್ತಿದ್ದಂತೆ ದಿನೇಶ್ ಗುಂಡೂರಾವ್‍ಗೆ ಬುಲಾವ್ ನೀಡಿರುವ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಪಟ್ಟದ ಬಗ್ಗೆ ಈ ಇಬ್ಬರು ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಲಿದೆ.
ಒಂದು ವೇಳೆ ಎಂ.ಬಿ.ಪಾಟಲ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡರೆ ಬಂಡಾಯ ಚಟುವಟಿಕೆಗಳು ತಣ್ಣಗಾಗಲಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮೂಲಗಳ ಪ್ರಕಾರ ಎಂ.ಬಿ.ಪಾಟೀಲ್ ತಮ್ಮ ಬಣದ ಐದು ಮಂದಿ ಪ್ರಮುಖರಿಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಮುಂದೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin