ಕಾಫಿನಾಡಲ್ಲಿ ಜೋರಾಗಿದೆ ವರುಣನ ಆರ್ಭಟ

ಈ ಸುದ್ದಿಯನ್ನು ಶೇರ್ ಮಾಡಿ

Rain
ಚಿಕ್ಕಮಗಳೂರು, ಜೂ.9- ಕಾಫಿ ನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯ ಮಲೆನಾಡು ಮತ್ತು ಬಯಲು ಸೀಮೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ತಾಲೂಕಿನ ಬಾಬಾ ಬುಡನ್‍ಗಿರಿ, ದಕ್ಷಿಣಘಟ್ಟ ಪ್ರದೇಶಗಳ ಗಿರಿಶ್ರೇಣಿ ಹಾಗೂ ಪಶ್ಚಿಮ ಘಟ್ಟಗಳ ಹಳ್ಳ-ಕೊಳ್ಳಗಳು, ಜಲಪಾತಗಳು ಮೈದುಂಬಿಕೊಂಡಿವೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮುಡಿ ಘಾಟ್, ನಿಡುವಾಳೆ, ಬೈರಾಪುರ, ದೇವ ವೃಂದ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಭದ್ರೆ, ಹೇಮಾವತಿ, ಚಿಕ್ಕಳ್ಳ ಸೇರಿದಂತೆ ಬಹುತೇಕ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭತ್ತದ ಗದ್ದೆಗಳೆಲ್ಲ ಜಲಾವೃತವಾಗಿದ್ದು, ನೋಡುಗರ ಕಣ್ಣಿಗೆ ಹಬ್ಬವುಂಟುಮಾಡಿದೆ. ಕೃಷಿಕರಲ್ಲಿ ಸಂತಸ ಮೂಡಿಸಿರುವ ಮಳೆರಾಯ ಶಾಲಾ-ಕಾಲೇಜಿಗೆ ತೆರಳುವವರಿಗೆ ಪರದಾಡುವಂತೆ ಮಾಡಿದೆ. ಕಳಸಾ, ಶೃಂಗೇರಿ, ಬಾಳೆಹೊನ್ನೂರು ಭಾಗದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಜಿಲ್ಲೆಯ ಕಡೂರು, ತರೀಕೆರೆ, ಬೀರೂರು ತಾಲೂಕುಗಳಲ್ಲೂ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣವಿದೆ.  ಜಿಟಿಜಿಟಿ ಮಳೆ ನಡುವೆಯೂ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.   ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರಿನಲ್ಲಿ 12 ಮಿಲಿಮೀಟರ್, ಹಿರೆಕೊಳಲು 12, ಆಲ್ದೂರು 42.5 ಮಿಲಿ ಮೀಟರ್ ಮಳೆಯಾಗಿದೆ.

Facebook Comments

Sri Raghav

Admin