‘ಅವರು ದೆಹಲಿಗೆ ಏತಕ್ಕಾಗಿ ಹೋದರು, ಏಕೆ ವಾಪಸ್ ಬಂದರು ಎಂಬುದು ನನಗೆ ಗೊತ್ತಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01
ಬೆಂಗಳೂರು, ಜೂ.10-ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಅತೃಪ್ತಗೊಂಡು ದಿಢೀರ್ ದೆಹಲಿಗೆ ಹೋಗಿದ್ದ ಎಂ.ಬಿ.ಪಾಟೀಲ್, ದಿನೇಶ್‍ಗುಂಡೂರಾವ್, ಕೃಷ್ಣಬೈರೇಗೌಡ ವಿರುದ್ಧ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬೇಸರ ವ್ಯಕ್ತಪಡಿಸಿದಂತೆ ಕಂಡುಬಂತು.ನಿನ್ನೆ ಎಂ.ಬಿ.ಪಾಟೀಲ್, ದಿನೇಶ್‍ಗುಂಡೂರಾವ್, ಕೃಷ್ಣಭೈರೇಗೌಡ ಅವರು ಹೈಕಮಾಂಡ್ ಜೊತೆ ನಡೆಸಿದ ಮಾತುಕತೆ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏತಕ್ಕಾಗಿ ಹೋದರು, ಏಕೆ ವಾಪಸ್ ಬಂದರು ಎಂಬುದು ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಎಂ.ಬಿ.ಪಾಟೀಲ್ ಅವರು ಪ್ರಬಲ ಸಚಿವಾಕಾಂಕ್ಷಿಯಾಗಿದ್ದು, ಸಂಪುಟದಲ್ಲಿ ಅವರಿಗೆ ಅವಕಾಶ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ಬೇಸರಗೊಂಡಿದ್ದು, ಅವರ ನಿವಾಸದಲ್ಲಿ ಹಲವು ಶಾಸಕರು ಸಭೆ ಸೇರಿ ಚರ್ಚೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಎಲ್ಲಿ ಸರ್ಕಾರಕ್ಕೆ ಆಪತ್ತು ಬರಬಹುದೋ ಎಂಬ ಕಾರಣ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಹಲವರು ಪಾಟೀಲ್ ನಿವಾಸಕ್ಕೆ ತೆರಳಿ ಅವರ ಮನವೊಲಿಕೆ ಯತ್ನ ನಡೆಸಿದ್ದರು.

ನಂತರ ಪಾಟೀಲ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿ ಹಿಂತಿರುಗಿದ್ದರು. ಈ ಬೆಳವಣಿಗೆ ಸಂಬಂಧ ಪರಮೇಶ್ವರ್ ಅವರು ಬೇಸರದಿಂದಲೇ ಪ್ರತಿಕ್ರಿಯಿಸಿ ಅವರು ಏಕೆ ದೆಹಲಿಗೆ ಹೋದರು, ಮತ್ತೆ ಏಕೆ ಹಿಂತಿರುಗಿದರು ಎಂಬುದರ ಮಾಹಿತಿಯಿಲ್ಲ , ನೀವು ಅವರನ್ನೇ ಕೇಳಿ ಎಂದು ಗರಂ ಆದರು. ಭಿನ್ನಮತದ ಬೆಳವಣಿಗೆಗಳು ನಡೆಯುತ್ತಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೈಲೆಂಟಾಗಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ತೆರಳಿದ್ದಾರೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ನಿನ್ನೆ ಪೊಲೀಸ್ ಅಧಿಕಾರಿಗಳೊಂದಿಗೆ ನಾನು ಸಭೆ ನಡೆಸಿದ್ದೇನೆ ಎಂದು ಹೇಳಿದರು.

Facebook Comments

Sri Raghav

Admin