ಕಣ್ಣಿಗೆ ರಾಸಾಯನಿಕ ಎರಚಿ ದೇವಾಲಯದ ಧರ್ಮದರ್ಶಿಯ ಕಾರು ಸಮೇತ 25 ಲಕ್ಷ ರೂ. ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

11-Arrested-Kunigal-Tumakur
ತುಮಕೂರು, ಜೂ.10-ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರಸಿದ್ಧ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಅವರ ಕಣ್ಣಿಗೆ ರಾಸಾಯನಿಕ ಎರಚಿ ಕಾರು ಸಮೇತ 25 ಲಕ್ಷ ರೂ.ಗಳನ್ನು ಸಿನಿಮೀಯ ರೀತಿಯಲ್ಲಿ ದೋಚಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಕುಣಿಗಲ್ ಪಟ್ಟಣದ ಹೊರವಲಯದಲ್ಲಿರುವ ಬಿದನಗೆರೆ ದೇವಸ್ಥಾನದ ಧರ್ಮದರ್ಶಿ ಧನಂಜಯ ಸ್ವಾಮೀಜಿಯವರು ನಿನ್ನೆ ರಾತ್ರಿ 9.30ರ ಸಮಯದಲ್ಲಿ ಪೂಜೆ ಮುಗಿಸಿಕೊಂಡು ದೇವಸ್ಥಾನದಿಂದ ಹೊರಬಂದು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಭಕ್ತರ ಸೋಗಿನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳ ತಂಡ ಸ್ವಾಮೀಜಿಯವರಿಗೆ ಅಡ್ಡಗಟ್ಟಿ ಹೊಸ ಕಾರಿಗೆ ಪೂಜೆ ಮಾಡಬೇಕು ಬನ್ನಿ ಎಂದು ತಡೆದಿದ್ದಾರೆ.

Tumakuru--01

ಕಾರಿನಿಂದ ಇಳಿದ ಧರ್ಮದರ್ಶಿಯವರಿಗೆ ಕೆಮಿಕಲ್ ಸ್ಪ್ರೇ ಸಿಂಪಡಿಸುತ್ತಿದ್ದಂತೆ ಪ್ರಜ್ಞಾಹೀನರಾಗಿದ್ದಾರೆ. ಈ ವೇಳೆ ಕಾರು ಸಮೇತ ನಗದನ್ನು ಕದ್ದೊಯ್ದ ಅವರು, ಘಟನೆ ನಡೆದ ಐದು ಕಿಲೋಮೀಟರ್ ಅಂತರದಲ್ಲಿ ಕಾರನ್ನು ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ.  ಕೆಮಿಕಲ್ ಸ್ಪ್ರೇಯಿಂದ ಪ್ರಜ್ಞಾಹೀನರಾದ ಸ್ವಾಮೀಜಿಯವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಿದನಗೆರೆಯಲ್ಲಿರುವ ಸತ್ಯಶನೈಶ್ಚರ ಹಾಗೂ ಉದ್ಭವ ಬಸವಣ್ಣ ಸ್ವಾಮಿ ಕ್ಷೇತ್ರಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಶನಿವಾರ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಕಾಣಿಕೆ, ದೇಣಿಗೆ ರೂಪದಲ್ಲಿ ಅಪಾರ ಹಣ ಬರುತ್ತಿತ್ತು. ಇದನ್ನು ಗಮನಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಕಳೆದ ಒಂದು ವಾರದಿಂದ ಈ ದುಷ್ಕರ್ಮಿಗಳ ತಂಡ ಇವರನ್ನು ಹಿಂಬಾಲಿಸಿ ಪ್ರತಿಯೊಂದು ಚಲನವಲನ ಗಮನಿಸಿ ದರೋಡೆ ಮಾಡಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Facebook Comments

Sri Raghav

Admin