ಇದೊಂದನ್ನು ಸರಿಯಾಗಿ ಮಾಡಿ ಸಾಕು, ಡೆಂಗ್ಯು-ಚಿಕೂನ್‍ಗುನ್ಯಾದಿಂದ ದೂರವಿರುತ್ತೀರಾ

ಈ ಸುದ್ದಿಯನ್ನು ಶೇರ್ ಮಾಡಿ

Degue--01

ಬೆಂಗಳೂರು,ಜೂ.10- ಡೆಂಗ್ಯು ಮತ್ತು ಚಿಕೂನ್‍ಗುನ್ಯಾ ವಿರುದ್ಧ ಹೋರಾಡಲು ನೀರು ಕುಡಿಯುತ್ತಿರಿ!ಹೀಗೆನ್ನುತ್ತಾರೆ, ನಾರಾಯಣ ಹೆಲ್ತ್ ಸಿಟಿ , ಸಮಾಲೋಚಕರಾದ ಡಾ.ಮಹೇಶ್ ಕುಮಾರ್. ಮುಂಗಾರು ಅತ್ಯಂತ ವೇಗದಲ್ಲಿ ವ್ಯಾಪಿಸಿಕೊಳ್ಳುತ್ತಿರುವ ಈ ಹೊತ್ತಲ್ಲಿ ಬೆಂಗಳೂರು ನಗರ ವೈರಲ್ ಜ್ವರ, ಡೆಂಗ್ಯು, ಚಿಕೂನ್‍ಗುನ್ಯಾ ಮತ್ತು ಆಹಾರದ ಸೋಂಕುಗಳಿಗೆ ಸಾಕ್ಷಿಯಾಗುತ್ತಿದೆ.

ಇತ್ತೀಚಿನ ಬಿಬಿಎಂಪಿ ವರದಿ ಪ್ರಕಾರ ನಗರದಲ್ಲಿ ಈಗಾಗಲೇ 41 ಚಿಕೂನ್‍ಗುನ್ಯಾ ಹಾಗೂ 368 ಡೆಂಗ್ಯು ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಗೇ ನಾರಾಯಣ ಹೆಲ್ತ್ ನಲ್ಲಿಯೂ ಕೂಡ ವೈರಲ್ ಜ್ವರ ಮತ್ತು ಆಹಾರ ಸೋಂಕಿನ ಪ್ರಕರಣಗಳಿಗೆ ಸಂಭಂದಿಸಿದಂತೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಏಡೀಸ್ ಸೊಳ್ಳೆ, ವಿಶೇಷ ಏಡಿಸ್ ಈಜಿಪ್ತಿ ಮತ್ತು ಏಡಿಸ್ ಆಲ್ಬೊಪಿಕ್ಟಸ್ ಸೊಳ್ಳೆಗಳು ವೈರಸ್‍ಗಳನ್ನು ಹರಡುತ್ತಿದ್ದು, ಇದರಿಂದ ಡೆಂಗ್ಯು ಮತ್ತು ಚಿಕೂನ್‍ಗುನ್ಯಾ ಕಾಣಿಸಿಕೊಳ್ಳುತ್ತಿವೆ.

ಈ ಸೊಳ್ಳೆಗಳು ತಾಜಾ ನೀರಿನಿಂದ ಹುಟ್ಟುತ್ತವೆ. ಮತ್ತು ವಾರದ ಅವಧಿಯಲ್ಲಿ 10,000 ಸಂಖ್ಯೆಗಳಷ್ಟು ಪ್ರಮಾಣದಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಮಳೆಗಾಲವಾದ್ದರಿಂದ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿರುತ್ತದೆ. ಹಾಗಾಗಿಯೇ ಸೋಂಕಿನ ಪ್ರಕರಣಗಳು ಸಾಮಾನ್ಯವಾಗಿ ಹೊಸ ಕಟ್ಟಡಗಳ ನಿರ್ಮಾಣ ಪ್ರದೇಶಗಳ ಸುತ್ತಮುತ್ತಲು ಹೆಚ್ಚು ಕಂಡು ಬರುತ್ತವೆ. ಆದ್ದರಿಂದ ಈ ಪ್ರದೇಶಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಭಾರಿ ಮಳೆಯ ನಂತರ ಸ್ವಚ್ಛತೆಗಾಗಿ ಸೂಕ್ತ ಸೌಲಭ್ಯಗಳನ್ನು ಹೆಚ್ಚಿಸುವುದು ಸೂಕ್ತವಾಗಿರುತ್ತದೆ.

ಡೆಂಗ್ಯು ಮುಖ್ಯ ಲಕ್ಷಣಗಳೆಂದರೆ ಕಣ್ಣುಗಳು ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ತೀವ್ರತರವಾದ ಮೈ ನೋವು (ಮೂಳೆ ಜ್ವರ). ಇನ್ನೊಂದೆಡೆ ಮೂಳೆಗಳ ಜೋಡಣೆಯಲ್ಲಿ ಅತಿಯಾದ ನೋವು, ಮುಂಗೈ ಮಣಿಕಟ್ಟು ಊತ, ಪಾದದ ಮಣಿಕಟ್ಟು, ಮಂಡಿಗಳಲ್ಲಿ ಊತಗಳು ಚಿಕೂನ್ ಗುನ್ಯಾದ ಆರಂಭಿಕ ಲಕ್ಷಣಗಳಾಗಿರುತ್ತವೆ. ಮುಂಗಾರು, ಆಹಾರ ಸೋಂಕುಗಳನ್ನು ತರಬಹುದು, ಇದರಿಂದಾಗಿ ಜ್ವರ, ವಾಂತಿ, ಬೇಧಿ, ಸುಸ್ತು ಮತ್ತು ಹೊಟ್ಟೆ ಮುರಿತಗಳು ಕಾಣಿಸಿಕೊಳ್ಳಬಹುದು.

ಇಂಥ ಸಂದರ್ಭದಲ್ಲಿ ಜ್ವರ, ಮೈ ನೋವು, ಶೀತ, ಗಂಟಲು ಕೆರೆತಗಳನ್ನು 24 ಗಂಟೆಗಳ ಅವಧಿಯಲ್ಲಿ ಗುರುತಿಸಲು ಸಾಧ್ಯವಾಗಬೇಕು. ಒಂದು ವೇಳೆ ಈ ಲಕ್ಷಣಗಳು ಕಂಡು ಬಂದಲ್ಲಿ ಮೊದಲ 24 ಗಂಟೆಗಳ ಅವಧಿಯಲ್ಲಿ 6 ರಿಂದ 8 ಗಂಟೆಗಳ ಅಂತರದಲ್ಲಿ 650 ಎಂಜಿ ಪ್ಯಾರಾಸಿಟಮಾಲ್ ಅನ್ನು ಸೇವಿಸಿ ಜ್ವರ ನಿಯಂತ್ರಣವಾಗುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ.  ವಿಶೇಷವಾಗಿ ಬೆಂಗಳೂರಿಗರು ಕಡ್ಡಾಯವಾಗಿ ದಿನಕ್ಕೆ 3ರಿಂದ 4 ಲೀಟರ್ ನೀರನ್ನು ಸೇವಿಸಬೇಕು. ಯಾವುದೇ ರೀತಿಯ ಸೋಂಕುಗಳನ್ನು ನಿಯಂತ್ರಿಸುವ ಅತ್ಯುತ್ತಮ ಪರಿಹಾರವೆಂದರೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವ ಮೂಲಕ ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸಿಕೊಳ್ಳುವುದು. ನೀರು, ತಾಜಾ ಹಣ್ಣಿನ ರಸ, ಎಲೆಕ್ಟ್ರಾಲ್, ಎಳನೀರು ಮತ್ತು ದಿನದಲ್ಲಿ 5 ರಿಂದ 6 ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುವುದು ಉತ್ತಮ.

Facebook Comments

Sri Raghav

Admin