ಚಾರ್ಮುಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ, ಸಂಚಾರ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

charmudi-ghat
ಬೆಂಗಳೂರು, ಜೂ.12- ಹಾಸನ, ಮಡಿಕೇರಿ, ಕರಾವಳಿ ಭಾಗದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಹಾಸನ, ಮಂಗಳೂರು ಚಾರ್ಮುಡಿಘಾಟ್‍ನಲ್ಲಿ ಹಲವೆಡೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಗಿದೆ.  ನಿನ್ನೆ ರಾತ್ರಿ ಚಾರ್ಮುಡಿಘಾಟ್‍ನಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ವಾಹನಗಳು ನಿಂತಲ್ಲೇ ನಿಂತಿವೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ನಡೆಸಲು ಅಡ್ಡಿ ಉಂಟಾಗಿದೆ.
ಅತ್ತ ವಾಹನಗಳಲ್ಲೇ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.

charmudi-ghat-1

ನಿನ್ನೆ ರಾತ್ರಿಯಿಂದ ಮುಂದೆ ಹೋಗಲಾರದೆ, ಹಿಂದಕ್ಕೂ ಬರಲಾಗದೆ ಒದ್ದಾಡುತ್ತಿದ್ದಾರೆ. ಪರ್ಯಾಯ ಮಾರ್ಗ ಕಲ್ಪಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಬಸ್, ವಿವಿಧ ವಾಹನಗಳಲ್ಲಿರುವ ಪ್ರಯಾಣಿಕರ ಊಟ-ತಿಂಡಿಗೂ ಸಮಸ್ಯೆಯಾಗಿದೆ. ವಿವಿಧ ವಾಹನಗಳಲ್ಲಿರುವ 200ಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೆ ಸಿಲುಕಿಕೊಂಡಿದ್ದು, ಸ್ಥಳೀಯರು, ಪೊಲೀಸರು ಇಂದು ಬೆಳಗ್ಗೆ ಅವರಿಗೆ ಆಹಾರ, ಇನ್ನಿತರ ಪದಾರ್ಥಗಳನ್ನು ಒದಗಿಸಿದ್ದಾರೆ.  ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇಂದು ಕೂಡ ಗುಡ್ಡ ಕುಸಿಯುವ ಮುನ್ಸೂಚನೆ ಇದ್ದು, ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ.  ಎರಡು ಜೆಸಿಬಿಗಳಿಂದ ಈಗಾಗಲೇ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದರೂ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿರುವುದರಿಂದ ಇನ್ನೂ ಕೆಲವು ಜೆಸಿಬಿಗಳ ಅಗತ್ಯವಿದೆಯಾದರೂ ಸ್ಥಳಕ್ಕೆ ಜೆಸಿಬಿಗಳನ್ನು ಕಳುಹಿಸಲು ಸಾಧ್ಯವಾಗದೆ ಇರುವುದು ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಮಳೆ ಕೊಂಚ ಕಡಿಮೆಯಾದ ಮೇಲೆ ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಯತ್ನವನ್ನು ಜಿಲ್ಲಾಡಳಿತ ನಡೆಸಿದೆ.
ಇತ್ತ ಹಾಸನ ಜಿಲ್ಲೆಯ ಬೇಲೂರು, ಆಲೂರು, ಸಕಲೇಶಪುರದಲ್ಲೂ ವರ್ಷಧಾರೆ ಮುಂದುವರಿದಿದೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಇಂದು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಡಿಕೇರಿಯಲ್ಲೂ ಕೂಡ ವರುಣನ ಆರ್ಭಟ ಜೋರಾಗಿದೆ. ಚಿಕ್ಕಮಗಳೂರು ಜಿಲ್ಲೆ, ಎನ್‍ಆರ್ ಪುರ, ಕೊಪ್ಪ, ಶೃಂಗೇರಿಯಲ್ಲಿ ಭಾರೀ ಮಳೆ ಸುರಿದಿದ್ದು, ಕೊಪ್ಪ ತಾಲೂಕಿನ ಸೂರ್ಯ ದೇಗುಲದ ಬಳಿ ಚಿಕ್ಕಸೇತುವೆ ಕುಸಿದಿದೆ. ಇಲ್ಲಿನ ಸಣ್ಣಪುಟ್ಟ ನದಿಗಳು ತುಂಬಿ ಹರಿಯುತ್ತಿವೆ.

Facebook Comments