ಕಿಟಕಿಯಿಂದ ಕೈ ತೂರಿಸಿ 64 ಗ್ರಾಂ ಸರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

Robbery
ಬೆಂಗಳೂರು, ಜೂ.12- ಕಿಟಕಿ ಪಕ್ಕ ಮಲಗಿದ್ದ ಮಹಿಳೆಯ ಕೊರಳಲ್ಲಿದ್ದ ಸರವನ್ನು ಕಳ್ಳ ಕೈ ತೂರಿಸಿ ಎಗರಿಸಲು ಯತ್ನಿಸಿ 64 ಗ್ರಾಂ ಸರದ ತುಂಡಿನೊಂದಿಗೆ ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯನಗರದ 2ನೆ ಕ್ರಾಸ್, 7ನೆ ಮುಖ್ಯರಸ್ತೆ ನಿವಾಸಿ ಮಂಜಮ್ಮ ಎಂಬುವವರು ರಾತ್ರಿ ಕಿಟಕಿ ಪಕ್ಕ ಮಲಗಿದ್ದರು. ಬೆಳಗಿನ ಜಾವ 3.15ರ ಸುಮಾರಿಗೆ ಇವರ ಮನೆ ಬಳಿ ಬಂದ ಕಳ್ಳ ತೆರೆದಿದ್ದ ಕಿಟಕಿ ಮೂಲಕ ಕೈ ತೂರಿಸಿ ಮಂಜಮ್ಮ ಅವರ ಕೊರಳಲ್ಲಿದ್ದ ಸರಕ್ಕೆ ಕೈ ಹಾಕಿದ್ದಾನೆ.

ತಕ್ಷಣ ಎಚ್ಚರಗೊಂಡ ಮಂಜಮ್ಮ ಸರವನ್ನು ಬಿಗಿಯಾಗಿ ಹಿಡಿದುಕೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಕಳ್ಳ ಬಲವಂತವಾಗಿ ಸರವನ್ನು ಎಳೆದಾಗ ಕೈಗೆ ಬಂದ 64 ಗ್ರಾಂ ಸರದ ತುಂಡಿನೊಂದಿಗೆ ಪರಾರಿಯಾಗಿದ್ದಾನೆ. ಮಂಜಮ್ಮ ಕೈಯಲ್ಲಿ 12 ಗ್ರಾಂ ಸರದ ತುಂಡು ಮಾತ್ರ ಉಳಿದಿದೆ.
ಮಂಜಮ್ಮ ಅವರ ಕಿರುಚಾಟದಿಂದ ನೆರೆಹೊರೆಯವರು ಎಚ್ಚರಗೊಂಡು ಹೊರಗೆ ಬರುವಷ್ಟರಲ್ಲಿ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದ. ಈ ಬಗ್ಗೆ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin