ಮಲೆನಾಡಿನಲ್ಲಿ ಮೇಘ ಸ್ಫೋಟ, ಜನರ ಪರದಾಟ..!

ಈ ಸುದ್ದಿಯನ್ನು ಶೇರ್ ಮಾಡಿ

Rain-Effect

ಚಿಕ್ಕಮಗಳೂರು, ಜೂ.12 – ಮಲೆನಾಡಿನಲ್ಲಿ ಎಡೆಬಿಡದೆ ಮುಂಗಾರು ಮಳೆ ಸುರಿಯುತ್ತಿದ್ದು, ನದಿ, ಕೆರೆಕಟ್ಟೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಲವು ಕಡೆ ಮರಗಳು ಧರೆಗುರುಳಿ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಅನೇಕ ಕಡೆ ನದಿಗಳ ನೀರಿನ ಹರಿವು ಹೆಚ್ಚಾಗಿ ರಸ್ತೆಗಳ ಮೇಲೆ ಮತ್ತೆ ಕೆಲವು ಕಡೆ ರಸ್ತೆ ಕುಸಿತ ಉಂಟಾಗಿದೆ. ಮಲೆನಾಡು ಭಾಗವಾದ ಮಡಿಕೇರಿ, ಶೃಂಗೇರಿ, ಎನ್‍ಆರ್ ಪುರ್, ಕಳಸಾ ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತುಂಗಾ ಮತ್ತು ಭದ್ರಾ ನದಿ ಸೇರಿದಂತೆ ಮೂಡಿಗೆರೆಯ ಹೇಮಾವತಿ ನೀರಿನ ಹರಿವು ಹೆಚ್ಚಾಗಿದೆ.

Rain-Effect-1

ಕಳಸಾದಿಂದ ಹೊರನಾಡಿಗೆ ಹೋಗುವ ರಸ್ತೆಯಲ್ಲಿ ನೀರು ನಿಂತಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಮುಳೆ ಹೀಗೇ ಮುಂದುವರೆದರೆ ಸೇತುವೆ ಮೇಲೆ ನೀರು ಹರಿದರೆ ಕಳಸಾ-ಹೊರನಾಡಿನ ಸಂರ್ಪಕ ಕಡಿತಗೊಳ್ಳಲಿದೆ.  ಚಿಕ್ಕಮಗಳೂರಿನ ಮೈಲಿಮನೆ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಆನೇಕಲ್ ಹೋಬಳಿಯ ಕೂಳೂರು ಗ್ರಾಮದ ವೇದಾವತಿ ಅವರ ಮನೆಯ ಗೋಡೆ ಕುಸಿದು 50 ಸಾವಿರ ಹಾನಿ ಸಂಭವಿಸಿದೆ.

ಗೋಣಿ ಬೀಡಿನ ತಿಮ್ಮೆಗೌಡರ ಕಾಂಪೌಡ್ ಉರುಳಿ ಬಿದ್ದಿದೆ. ಕೊಪ್ಪ ತಾಲೂಕಿನ ಅಪ್ಪೇಗೌಡರ ಮನೆ ಮೇಲೆ ಮರ ಬಿದ್ದು, ಸಾವಿರಾರು ರೂ. ನಷ್ಟ ಉಂಟಾಗಿದೆ.
ತುಂಗಾನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ಮಲೆನಾಡಿನ ಜನರ ಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ನಿನ್ನೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಇಂದು ಕೂಡ ಶೃಂಗೇರಿ, ಕೊಪ್ಪ , ನರಸಿಂಹರಾಜಪುರ, ಮೂಡಿಗೆರೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಈ ಭಾಗದಲ್ಲಿ 24 ಗಂಟೆಯಲ್ಲಿ 208 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಯ ಆನೆಗುಡ್ಡದ ಬಳಿ ವಿದ್ಯುತ್ ಕಂಬ ರಸ್ತೆಗೆ ಉರುಳಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲೆ ಜನರು ಜೀವನ ಸಾಗಿಸುವಂತಾಗಿದೆ.

Facebook Comments

Sri Raghav

Admin