ಟ್ರಂಪ್-ಕಿಮ್ ಭೇಟಿ ಹಿನ್ನೆಲೆಯಲ್ಲೇ ಕೊರಿಯಾದಲ್ಲಿ ಶೀಘ್ರ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಪ್ರಕ್ರಿಯೆ ಶುರು

ಈ ಸುದ್ದಿಯನ್ನು ಶೇರ್ ಮಾಡಿ

DfdM3A9XUAIUVF8

ಸಿಂಗಪುರ್, ಜೂ.12-ವಿಶ್ವದ ಕಡು ವೈರಿಗಳೆಂದೇ ಗುರುತಿಸಲ್ಟಟ್ಟಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾ ಇಂದು ಐತಿಹಾಸಿಕ ಶೃಂಗಸಭೆ ಬಳಿಕ ಸಮಗ್ರ ಒಡಂಬಡಿಕೆ ದಾಖಲೆಗೆ ಸಹಿ ಮಾಡುವ ಮೂಲಕ ಶಾಂತಿ ಸ್ಥಾಪನೆಗೆ ಮುನ್ನುಡಿ ಬರೆದಿವೆ. ಕೊರಿಯಾ ದ್ವೀಪಕಲ್ಪದಲ್ಲಿ ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಹಾಗೂ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆಗೆ ಉಭಯ ರಾಷ್ಟ್ರಗಳ ಅಧ್ಯಕ್ಷರುಗಳಾದ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ನಡುವೆ ಒಡಂಬಡಿಕೆ ಏರ್ಪಟ್ಟಿದೆ. ಈ ಚಾರಿತ್ರಿಕ ಶೃಂಗಸಭೆ ಫಲಪ್ರದವಾಗಿರುವುದನ್ನು ಜಗತ್ತಿನ ಅನೇಕ ದೇಶಗಳು ಸ್ವಾಗತಿಸಿವೆ.

ಇಡೀ ವಿಶ್ವವೇ ಕಾತುರದಿಂದ ನಿರೀಕ್ಷಿಸುತ್ತಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾ ಅಭೂತಪೂರ್ವ ಶೃಂಗಸಭೆಗೆ ಇಂದು ಸಿಂಗಪುರ್ ಸಾಕ್ಷಿಯಾಯಿತು. ಕೊರಿಯಾ ಪರ್ಯಾಯ ದ್ವೀಪದಲ್ಲಿ ಪರಿಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಹಾಗೂ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆಗೆ ಉಭಯ ರಾಷ್ಟ್ರಗಳು ಇಂದು ಮಹತ್ವದ ಒಪ್ಪಂದ ಮಾಡಿಕೊಂಡಿರುವುದು ವಿಶ್ವದ ಸೌಹಾರ್ದ ವಾತಾವರಣದಲ್ಲಿ ಒಂದು ಹೊಸ ಅಧ್ಯಾಯವಾಗಿದೆ.

ಒಡಂಬಡಿಕೆ ದಾಖಲೆಗೆ ಕಿಮ್ ಜೊತೆ ಸಹಿ ಹಾಕಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಟ್ರಂಪ್. ನಾವು ಇಂದು ಮಹತ್ವದ ಸಮಗ್ರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ನಿರೀಕ್ಷೆಗೂ ಮೀರಿದ ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಸಂಬಂಧ ಬಲವರ್ಧನೆಯಾಗಲಿದೆ ಹಾಗೂ ಕೊರಿಯಾ ದ್ವೀಪಕಲ್ಪದಲ್ಲಿ ಶೀಘ್ರ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಪ್ರಕ್ರಿಯೆ ಶುರುವಾಗಲಿದೆ ಎಂದರು. ಕಿಮ್ ಮಾತನಾಡಿ, ಹಿಂದಿನ ಕಹಿ ಘಟನೆಗಳನ್ನು ನಾವು ಮರೆತಿದ್ದೇವೆ. ವಿಶ್ವವು ಮಹತ್ವದ ಪರಿವರ್ತನೆ ಕಾಣಲಿದೆ ಎಂದು ನುಡಿದರು.

ಸಿಂಗಪುರ್‍ನಲ್ಲಿ ಮುಂಜಾನೆ ಸಭೆ : ಸಿಂಗಪುರ್‍ನ ಸೆಂಟೋನಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್‍ನಲ್ಲಿ ಇಂದು ಬೆಳಗ್ಗೆ 6.30ರಲ್ಲಿ ವಿಶ್ವದ ಬಲಾಢ್ಯ ನಾಯಕರಾದ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಮುಖಾಮುಖಿಯಾದರು. ಅಮೆರಿಕ ಮತ್ತು ಉತ್ತರ ಕೊರಿಯಾ ರಾಷ್ಟ್ರಧ್ವಜಗಳ ಹಿನ್ನೆಲೆಯಲ್ಲಿ ಈ ನಾಯಕರು ಪರಸ್ಪರ 12 ಸೆಕೆಂಡುಗಳು ಕಾಲ ಹಸ್ತಲಾಘವ ಮಾಡಿ ಪರಸ್ಪರ ಸ್ವಾಗತ ಕೋರಿ ಆತ್ಮೀಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಹೋಟೆಲ್ ಗ್ರಂಥಾಲಯದವರೆಗೂ ಕಾರಿಡಾರ್ ಮೂಲಕ ಒಟ್ಟಿಗೆ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸಂಕ್ಷಿಪ್ತ ಪ್ರತಿಕ್ರಿಯೆ ನೀಡಿದ ಟ್ರಂಪ್, ಇದೊಂದು ಅವಿಸ್ಮರಣೀಯ ಅನುಭವ. ಈ ಐತಿಹಾಸಿಕ ಶೃಂಗಸಭೆ ಅದ್ಭುತ ಯಶಸ್ಸು ಸಾಧಿಸಲಿದೆ, ನಾವು ಮುಂದೆ ಉತ್ತಮ ಸಂಬಂಧ ಹೊಂದುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಸಿಂಗಪುರ್‍ನ ಈ ಸಭೆಗೂ ಮುನ್ನ ನಾವು ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಯಿತು. ಅವೆಲ್ಲವನ್ನೂ ಮೀರಿ ನಾವು ಇಂದು ಇಲ್ಲಿಗೆ ಬಂದಿದ್ದೇವೆ ಎಂದು ಕಿಮ್ ಹೇಳಿದ್ದನ್ನು ದುಬಾಷಿಗಳು ವರದಿಗಾರರಿಗೆ ತಿಳಿಸಿದರು. ಈ ಮಾತಿಗೆ ಟ್ರಂಪ್ ಅನಂತ ಧನ್ಯವಾದಗಳು ಎಂದು ಹೇಳಿದರು.

ಇದಾದ ಬಳಿಕ ಬೆಳಗ್ಗೆ 9.06 ಆರಂಭಗೊಂಡ ಈ ಐತಿಹಾಸಿಕ ದ್ವಿಪಕ್ಷೀಯ ಸಭೆಯಲ್ಲಿ ಭಾಷಾಂತರಕಾರರ ನೆರವಿನಿಂದ ಉಭಯ ನಾಯಕರು ಸುಮಾರು 45 ನಿಮಿಷಗಳ ಕಾಲ ಮಹತ್ವದ ಚರ್ಚೆ ನಡೆಸಿದರು.  ಬಳಿಕ ಸಭೆಯ ಫಲಶೃತಿ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ತುಂಬಾ ಸೌಹಾರ್ದಯುತ ಸಭೆ. ಉತ್ತಮ ಸಂಬಂಧ ಸುಧಾರಣೆಗೆ ಸಭೆ ನೆರವಾಗಿದೆ ಎಂದು ಟ್ರಂಪ್ ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಅಮೆರಿಕ ಅಧ್ಯಕ್ಷರು ಮೂರು ಬಾರಿ ಅಣ್ವಸ್ತ್ರಗಳನ್ನು ತ್ಯಜಿಸುವಂತೆ ಕೇಳಿದಾಗ, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಕಿಮ್ ಮುಗಳ್ನಗೆ ಬೀರಿದರು. ಇದಾದ ಬಳಿಕ ಉಭಯ ದೇಶಗಳ ಉನ್ನತ ನಿಯೋಗ ವಿಸ್ತರಿತ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉತ್ತರ ಕೊರಿಯಾ ಈ ಹಿಂದೆ ವಿನಾಶಕಾರಿ ಅಣ್ವಸ್ತ್ರಗಳು ಮತ್ತು ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿ ಪರೀಕ್ಷೆಗಳ ಮೂಲಕ ವಿಶ್ವದ ದೊಡ್ಡಣ್ಣನಿಗೆ ಸಡ್ಡು ಹೊಡೆದಿತ್ತು. ಆಗ ಮಿಸೈಲ್ ಮ್ಯಾನ್ ಕುಖ್ಯಾತಿಯ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಟ್ರಂಪ್ ಸರ್ವನಾಶದ ಎಚ್ಚರಿಕೆ ನೀಡಿದ್ದರು. ಈಗ ಐತಿಹಾಸಿಕ ಒಪ್ಪಂದದೊಂದಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

Facebook Comments

Sri Raghav

Admin