ಜಯನಗರದಲ್ಲಿ ಬಿಜೆಪಿ ಮಣ್ಣುಮುಕ್ಕಲು ಕಾರಣವೇನುಗೋತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

BJP-Jayanagara--01

ಬೆಂಗಳೂರು, ಜೂ.13-ನಾಯಕರ ಒಳಜಗಳ, ಆಂತರಿಕ ಕಚ್ಚಾಟ, ಪ್ರತಿಷ್ಠೆ , ಪರಸ್ಪರ ಕಾಲೆಳೆಯುವಿಕೆ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಂತಹ ಪರಿಸ್ಥಿತಿಯಿಂದಲೇ ಪ್ರತಿಷ್ಠಿತ ಜಯನಗರದಲ್ಲಿ ಬಿಜೆಪಿ ಮಣ್ಣು ಮುಕ್ಕುವಂತಾಗಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್,ಡಿ.ವಿ.ಸದಾನಂದಗೌಡ ನಡುವೆ ಕಂಡುಬರದ ಹೊಂದಾಣಿಕೆ, ಸ್ಥಳೀಯ ನಾಯಕರ ಮುನಿಸು, ವಿಧಾನಸಭೆಯಲ್ಲಿ ಅಧಿಕಾರ ಕಳೆದುಕೊಂಡ ಹತಾಶೆಯೇ ಸೋಲಿಗೆ ಕಾರಣ ಎಂಬ ಮಾತು ಕೇಳಿಬರುತ್ತಿದೆ.

ಬಹುತೇಕ ಸುಶಿಕ್ಷಿತರು ಹಾಗೂ ವಿದ್ಯಾವಂತರನ್ನೇ ಒಳಗೊಂಡಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ನಿರೀಕ್ಷಿತವಾಗಿರಲಿಲ್ಲ. ದೊಡ್ಡ ಕಾರ್ಯಕರ್ತರ ಪಡೆಯನ್ನೇ ಹೊಂದಿರುವ ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಸೋಲಿನಿಂದ ತಪ್ಪಿಸಿಕೊಳ್ಳಬಹುದಿತ್ತು.  ಆದರೆ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ, ಅನಂತಕುಮಾರ್ ಅವರಿಗೆ ಹಿನ್ನೆಡೆ ಮಾಡಬೇಕೆಂಬ ದುರದ್ದೇಶ, ಕೈ ಕೊಟ್ಟ ನಂಬಿಕಸ್ಥರು, ಸ್ಥಳೀಯ ಬಿಬಿಎಂಪಿ ಸದಸ್ಯರ ಮುನಿಸು ಫಲಿತಾಂಶದ ಮೇಲೆ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ.

ಬಿ.ಎನ್.ವಿಜಯಕುಮಾರ್ ನಿಧನರಾದ ಬಳಿಕ ಮುಂದೂಡಲ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಲವು ಹೆಸರುಗಳು ಕೇಳಿಬಂದಿದ್ದವು. ಸ್ಥಳೀಯ ಬಿಬಿಎಂಪಿ ಸದಸ್ಯರಾದ ಎನ್.ನಾಗರಾಜ್, ಸಿ.ಕೆ.ರಾಮಮೂರ್ತಿ, ಮಾಜಿ ಮೇಯರ್ ಎಸ್.ಕೆ.ನಟರಾಜ್ ಸೇರಿದಂತೆ ಮತ್ತಿತರರು ಆಕಾಂಕ್ಷಿಗಳಾಗಿದ್ದರು.
ಆದರೆ ವಿಜಯಕುಮಾರ್ ಸಾವಿನ ಅನುಕಂಪವನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಬಿಜೆಪಿ ಅವರ ಸಹೋದರ ಪ್ರಹ್ಲಾದ್ ಬಾಬುಗೆ ಟಿಕೆಟ್ ನೀಡಿದಾಗಲೇ ಕ್ಷೇತ್ರದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಒಗ್ಗೂಡದ ಬಿಜೆಪಿ:
ಇನ್ನು ಬಿಜೆಪಿಯಲ್ಲಿ ಬಣ ರಾಜಕೀಯವೇ ಮೇಳೈಸಿದ್ದರಿಂದ ನಾಯಕರಲ್ಲಿ ಒಮ್ಮತ ಮೂಡದೇ ವಿರುದ್ಧ ದಿಕ್ಕಿನಲ್ಲೇ ಪ್ರಚಾರ ನಡೆಸಿದರು. ಕ್ಷೇತ್ರದ ಉಸ್ತುವಾರಿಯನ್ನು ಯಡಿಯೂರಪ್ಪ ಅನಂತಕುಮಾರ್ ಹೆಗಲಿಗೆ ನೀಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡರು. ಅದರಲ್ಲೂ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲರಾದ ಮೇಲಂತೂ ಯಡಿಯೂರಪ್ಪ ಈ ಚುನಾವಣೆಯನ್ನು ಪರಿಗಣಿಸಲಿಲ್ಲ. ಎಲ್ಲಿ ಬಿಜೆಪಿ ಗೆದ್ದರೆ ಅದರ ಶ್ರೇಯಸ್ಸು ಅನಂತಕುಮಾರ್‍ಗೆ ದಕ್ಕಲಿದೆ ಎಂಬ ಕಾರಣಕ್ಕಾಗಿಯೇ ಸಂಪೂರ್ಣ ಮನಸ್ಸಿನಿಂದ ಪ್ರಚಾರ ಮಾಡಲಿಲ್ಲ.

ನೆಪ ಮಾತ್ರಕ್ಕೆ ಒಂದೆರಡು ಬಾರಿ ಪ್ರಚಾರ ನಡೆಸಿದರಾದರೂ ಪೂರ್ಣ ಮನಸ್ಸಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿಲ್ಲ ಎಂಬ ಮಾತುಗಳು ಕೇಳಿಬಂದವು. ಅನಂತಕುಮಾರ್ ಶತಾಯ-ಗತಾಯ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಲೇಬೇಕೆಂದು ಹರಸಾಹಸಪಟ್ಟರೂ ಸ್ಥಳೀಯ ನಾಯಕರ ಬೆಂಬಲ ಇಲ್ಲದ ಕರಣ ಅವರ ಪ್ರಯತ್ನವೂ ಈಡೇರಲಿಲ್ಲ.

ವರಿಷ್ಠರ ಕೆಂಗಣ್ಣು :
ಇನ್ನು ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸೋಲನ್ನು ಕೇಂದ್ರ ಬಿಜೆಪಿ ನಾಯಕರು ಗಂಭೀರವಾಗೇ ಪರಿಗಣಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಬೇರುಗಳು ಸಾಕಷ್ಟು ಭದ್ರವಾಗಿದ್ದರೂ ಸೋಲಿಗೆ ಕಾರಣ ತಿಳಿಸಬೇಕೆಂದು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ. ಈ ಫಲಿತಾಂಶದಿಂದ ಪಕ್ಷಕ್ಕೆ ಹಾನಿಯಾಗಿದ್ದು , ಮುಂಬರುವ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Facebook Comments

Sri Raghav

Admin