ವಿಧಾನಸಭೆಯಲ್ಲಿ ಅಪ್ಪ-ಮಗಳು, ಕರ್ನಾಟಕದ ಇತಿಹಾಸದಲ್ಲೇ ಇದೆ ಮೊದಲ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy-001

ಬೆಂಗಳೂರು,ಜೂ.13- ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಅಪ್ಪ -ಮಗಳು ಏಕಕಾಲಕ್ಕೆ ವಿಧಾನಸಭೆ ಪ್ರವೇಶಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಸಾಮಾನ್ಯವಾಗಿ ಅಪ್ಪ-ಮಕ್ಕಳು ಒಂದೇ ಹಂತದಲ್ಲಿ ವಿಧಾನಸಭೆಗೆ ಆಯ್ಕೆಯಾದ ನಿದರ್ಶನಗಳು ಸಾಕಷ್ಟಿವೆ. 1994ರಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಹಾಗೂ ಅವರ ಪುತ್ರ ಎಚ್.ಡಿ.ರೇವಣ್ಣ ಅವರಿಂದ ಹಿಡಿದು ಇತ್ತೀಚೆಗೆ ಮುಗಿದ 15ನೇ ವಿಧಾನಸಭೆ ಚುನಾವಣೆಯಲ್ಲಿ ಅಪ್ಪ -ಮಕ್ಕಳು ವಿಧಾನಸಭೆಗೆ ಆಯ್ಕೆಯಾಗಿದ್ದರು.

ಪ್ರಸಕ್ತ ಈ ಬಾರಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯನವರು ಬಾಗಲಕೋಟೆ ಜಿಲ್ಲೆ ಬಾದಾಮಿ ಯಿಂದ ಡಾ.ಯತೀಂದ್ರ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು.

ಕಳೆದ 15ನೇ ವಿಧಾನಸಭೆ ಚುನಾವಣೆಯಲ್ಲಿ ಅಪ್ಪ-ಮಕ್ಕಳೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ದಾವಣಗೆರೆ ದಕ್ಷಿಣದಿಂದ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ , ದಾವಣಗೆರೆ ಉತ್ತರದಿಂದ ಎಸ್.ಎಸ್.ಮಲ್ಲಿಕಾರ್ಜುನ್, ಬೆಂಗಳೂರಿನ ವಿಜಯನಗರದಿಂದ ಎಂ.ಕೃಷ್ಣಪ್ಪ , ಗೋವಿಂದರಾಜು ನಗರದಿಂದ ಅವರ ಪುತ್ರ ಪ್ರಿಯಕೃಷ್ಣ ವಿಧಾನಸಭೆಗೆ ಆಯ್ಕೆಯಾಗಿದ್ದರು.  ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಪ್ರಿಯಕೃಷ್ಣ ಸೋಲು ಅನುಭವಿಸಿದರೆ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಕೃಷ್ಣಪ್ಪ ಅವರನ್ನು ಮತದಾರ ಕೈ ಹಿಡಿದಿದ್ದ. ಈಗ ಜಯನಗರದಿಂದ ವಿಜೇತರಾಗಿರುವ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದ್ದು , ಅಪ್ಪ-ಮಗಳು ಏಕಕಾಲದಲ್ಲಿ ವಿಧಾನಸಭೆಗೆ ಆಯ್ಕೆಯಾದ ನಿದರ್ಶನವಿದು.

ಈಗಾಗಲೇ ರಾಮಲಿಂಗಾರೆಡ್ಡಿ ಅವರು ಬಿಟಿಎಂ ಲೇಔಟ್‍ನಿಂದ ಗೆದ್ದಿದ್ದರೆ ಅವರ ಪುತ್ರ ಪಕ್ಕದ ಜಯನಗರ ದಿಂದ ಗೆಲುವಿನ ನಗೆ ಬೀರಿದ್ದಾರೆ. ಅಪ್ಪ-ಮಕ್ಕಳು ಮಾತ್ರ ವಲ್ಲದೆ ಅಣ್ಣತಮ್ಮಂದಿರು ಗೆದ್ದು ಬಂದ ಪ್ರಸಂಗಗಳಿವೆ. ಹಾಲಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರ ಸ್ವಾಮಿ ಅವರು ರಾಮನಗರದಿಂದ ಗೆದ್ದರೆ ಅವರ ಹಿರಿಯ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ ಗೆದ್ದುಬಂದಿದ್ದಾರೆ. ಒಂದೊಂದು ಬಾರಿ ಅಪ್ಪ-ಮಕ್ಕಳು , ಅಣ್ಣತಮ್ಮಂದಿರು ಗೆದ್ದು ಬರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆಯಾದರೂ ರಾಜಕಾರಣದಲ್ಲಿ ಇತ್ತೀಚೆಗೆ ಇದು ಸರ್ವೇಸಾಮಾನ್ಯ ಎಂಬಂತಾಗಿದೆ.

Facebook Comments

Sri Raghav

Admin