ವಸತಿ ನಿವೇಶನದಲ್ಲಿ ನಿರ್ಮಾಣವಾದ ವಾಣಿಜ್ಯ ಕಟ್ಟಡಗಳ ತೆರವಿಗೆ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

G-Parameshwar

ಬೆಂಗಳೂರು, ಜೂ.13- ಜನವಸತಿ ಉದ್ದೇಶಕ್ಕೆ ಪರವಾನಗಿ ಪಡೆದು ವಾಣಿಜ್ಯ ಉದ್ದೇಶಗಳಿಗೆ ಕಟ್ಟಡಗಳನ್ನು ಬಳಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂತಹ ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವಸತಿ ಕಾರಣಕ್ಕಾಗಿ ಅನುಮತಿ ಪಡೆದ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಸಮೀಕ್ಷೆ ನಡೆದಿದ್ದು, ಶೇ.30ರಷ್ಟು ಉಲ್ಲಂಘನೆಯಾಗಿರುವ ಮಾಹಿತಿ ಇದೆ. ನನ್ನ ವೈಯಕ್ತಿಕ ಮಾಹಿತಿ ಪ್ರಕಾರ ಅದು ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ನೋಟೀಸ್ ನೀಡಲಾಗುವುದು. ಅವರು ವಾಣಿಜ್ಯ ಉದ್ದೇಶವನ್ನು ಬಿಟ್ಟು ಜನವಸತಿ ಉದ್ದೇಶಕ್ಕಾಗಿಯೇ ಕಟ್ಟಡಗಳನ್ನು ಬಳಸಿದ್ದರೆ ಯಾವುದೇ ತೊಂದರೆ ಇಲ್ಲ. ಇಲ್ಲದೆ ಹೋದರೆ ಅಂತಹ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಇತ್ತೀಚೆಗೆ ಕಸ ಸಾಗಾಣಿಕೆ ಗುತ್ತಿಗೆದಾರರು ಬಾಕಿ ಹಣ ಪಾವತಿಗಾಗಿ ಮುಷ್ಕರಕ್ಕೆ ಮುಂದಾಗಿದ್ದರು. ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ. ಇನ್ನು ಮುಂದೆ ಕಸದ ನಿರ್ವಹಣೆಗೆ ಅಗತ್ಯವಾದಷ್ಟು ಹಣವನ್ನು ಪ್ರತ್ಯೇಕವಾಗಿ ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಇಲ್ಲದೆ ಹೋದರೆ ಪ್ರತಿ ಬಾರಿಯೂ ಬಿಲ್ ಪಾವತಿಯಾಗಿಲ್ಲ ಎಂದು ಮುಷ್ಕರದ ಹೆಸರಿನಲ್ಲಿ ಬ್ಲಾಕ್‍ಮೇಲ್ ನಡೆಯುತ್ತದೆ. ಅದಕ್ಕೆ ಅವಕಾಶ ನೀಡಬಾರದು. ಕಸ ನಿರ್ವಹಣೆಗೆ ಎಷ್ಟು ಖರ್ಚು ಆಗುತ್ತದೆ ಎಂಬ ಲೆಕ್ಕವಿದೆ. ಅಷ್ಟನ್ನು ಕಾಯ್ದಿರಿಸಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮಳೆ ನೀರಿನಿಂದ ಅನಾಹುತಗಳಾಗುವುದನ್ನು ತಪ್ಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ವರ್ಷ ಎಲ್ಲೆಲ್ಲಿ ಅನಾಹುತಗಳಾಗಿದ್ದವು, ಪ್ರವಾಹದ ಪರಿಸ್ಥಿತಿ ಎಂಬುದು ಗೊತ್ತಿದೆ. ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳವಂತೆ ಸೂಚಿಸಲಾಗಿದೆ. ರಾಜಕಾಲುವೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು,. ಜೊತೆಗೆ ಸ್ಪಷ್ಟ ನಕ್ಷೆಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚುನಾವಣೆ ಕಾರ್ಯಕ್ಕಾಗಿ ಕೆಲವು ದಿನ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಅದು ಮತ್ತೆ ಮುಂದುವರೆಯಲಿದೆ.

ಈ ಹಿಂದೆ ಮಳೆ ಅನಾಹುತಗಳಿಗಾಗಿ ಸಾಕಷ್ಟು ಜೀವಹಾನಿಯಾಗಿದೆ, ನಷ್ಟವಾಗಿದೆ. ಮತ್ತೆ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ವಾರದೊಳಗಾಗಿ ಬೆಂಗಳೂರಿನಲ್ಲಿ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆಯೂ ತಾಕೀತು ಮಾಡಲಾಗಿದೆ ಎಂದರು. ಕಸದಿಂದ ವಿದ್ಯುತ್ ತಯಾರಿಸುವ ಯೋಜನೆ ಕೈಗೆತ್ತಿಕೊಳ್ಳಲು ಚಿಂತನೆ ನಡೆದಿದ್ದು, ಫ್ರೆಂಚ್ ತಂತ್ರಜ್ಞಾನ ಬಳಸಿಕೊಳ್ಳಲು ಚರ್ಚೆ ನಡೆಯುತ್ತಿದೆ. ಯಾವುದೇ ಲಾಬಿಗೆ ಮಣಿಯದೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ಜಯನಗರ ವಿಧಾನಸಭೇ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್‍ನ ಸೌಮ್ಯರೆಡ್ಡಿ ಹಾಗೂ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಚಂದ್ರಶೇಖರ್ ಪಾಟೀಲ್ ಅವರಿಗೆ ಪರಮೇಶ್ವರ್ ಅವರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭ್ರಷ್ಟಾಚಾರದ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಯಾವ ಅರ್ಥದಲ್ಲಿ ಮಾಥನಾಡಿದ್ದಾರೋ ಗೊತ್ತಿಲ್ಲ. ಆದರೆ ಹಿಂದೆ ನಮ್ಮ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿತ್ತು. ಭ್ರಷ್ಟಾಚಾರ ನಿಗ್ರಹಕ್ಕಾಗಿ ಎಸಿಬಿ, ಲೋಕಾಯುಕ್ತದಂತಹ ಹಲವಾರು ಸಂಸ್ಥೇಗಳಿವೆ ನಾವು ಅವನ್ನು ಬಳಸಿಕೊಂಡು ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕಿದೆ ಎಂದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ. ತನಿಖೆ ಪೂರ್ಣಗೊಂಡ ನಂತರ ಸಮಗ್ರ ಮಾಹಿತಿ ನೀಡುತ್ತೇನೆ. ತನಿಖೆ ಮುಂದುವರೆಯುತ್ತಿರುವ ಹಂತದಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವಂತದ್ದು.

Facebook Comments

Sri Raghav

Admin