ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸಿಗೋದು ಡೌಟ್

ಈ ಸುದ್ದಿಯನ್ನು ಶೇರ್ ಮಾಡಿ

Bus-Pass

ಬೆಂಗಳೂರು, ಜೂ.13- ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಎಲ್ಲಾ ವರ್ಗದ ಉಚಿತ ಬಸ್‍ಪಾಸ್ ಯೋಜನೆಯನ್ನು ಜಾರಿಗೆ ತರಲು ಸಮ್ಮಿಶ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ನೂತನ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಎಲ್ಲಾವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು 629ಕೋಟಿಯಷ್ಟು ಆರ್ಥಿಕ ಹೊರೆಯಾಗುತ್ತದೆ. ಈಗಾಗಲೇ ನಾಲ್ಕು ಸಾರಿಗೆ ನಿಗಮಗಳು ತಲಾ 500 ಕೋಟಿ ರೂ. ನಷ್ಟದಲ್ಲಿವೆ. ಮೇಲಾಗಿ ಈ ಹಿಂದೆ ಸಿದ್ದರಾಮಯ್ಯ ಅವರು ಈ ಯೋಜನೆ ಘೋಷಣೆ ಮಾಡುವಾಗ ಆರ್ಥಿಕ ಇಲಾಖೆಯ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಉಚಿತ ಬಸ್‍ಪಾಸ್‍ಗೆ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಹೇಳಿದರು.

ಉಚಿತ ಬಸ್ ಪಾಸ್ ಯೋಜನೆಯನ್ನು ಯಾವ ರೀತಿ ಜಾರಿಗೊಳಿಸಬೇಕೆಂದು ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇವೆ. ಅಧಿಕಾರಿಗಳ ಜತೆ ನಾನು ಹಲವಾರು ಸಭೆಗಳನ್ನು ಮಾಡಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಸಮಾಲೋಚನೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಪ್ರಮುಖ ಸಭೆ ನಡೆಸಲಾಗುವುದು. ಮುಂದಿನ ಬಜೆಟ್‍ನಲ್ಲಿ ಈ ಯೋಜನೆಯನ್ನು ಸೇರಿಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಇನ್ನು ಮುಂದೆ ಬಸ್ ಪಾಸ್‍ಗಾಗಿ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಕೌಂಟರ್‍ಗಳಿಗೆ ಅಲೆಯುವ ಅಗತ್ಯವಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ನೂತನ ಯೋಜನೆ ರೂಪಿಸಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳು ಓದುವ ಶಾಲಾ-ಕಾಲೇಜುಗಳಲ್ಲೇ ಪಾಸ್‍ಗಳ ವಿತರಣೆಯಾಗಲಿದೆ.
ಈ ವರೆಗೂ ವಿದ್ಯಾರ್ಥಿಗಳು ಶುಲ್ಕ ಕಟ್ಟಿದ ರಶೀತಿ, ಜಾತಿ ಪ್ರಮಾಣ ಪತ್ರ ಮತ್ತು ಸ್ಥಳೀಯ ವಾಸದ ಪ್ರಮಾಣ ಪತ್ರಗಳು ಸೇರಿ ಐದು ದಾಖಲಾತಿಗಳೊಂದಿಗೆ ಬಿಎಂಟಿಸಿ ಮತ್ತು ಕೆಎಸ್‍ಆರ್‍ಟಿಸಿ ಕೌಂಟರ್‍ಗಳಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಪಾಸ್ ಪಡೆಯಲು ಮೂರ್ನಾಲ್ಕು ಬಾರಿ ಅಲೆಯಬೇಕಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದ್ದು, ಇದನ್ನು ತಪ್ಪಿಸಲು ದೇಶದಲ್ಲೇ ನೂತನ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಶಾಲಾ-ಕಾಲೇಜುಗಳಲ್ಲೇ ಪಾಸ್‍ಗಳನ್ನು ವಿತರಿಸಲಾಗುತ್ತಿದೆ.

ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಶಾಲಾ-ಕಾಲೇಜಿಗೆ ದಾಖಲಾದಾಗ ಶಿಕ್ಷಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಸಮಗ್ರ ಮಾಹಿತಿ ಅಪ್‍ಲೋಡ್ ಆಗಲಿದ್ದು, ಅದು ಸಾರಿಗೆ ಇಲಾಖೆಯ ವೆಬ್‍ಸೈಟ್‍ಗೆ ಲಿಂಕ್ ಆಗಲಿದೆ. ಅದನ್ನು ಆಧರಿಸಿ ನಾವು ಬಸ್ ಪಾಸ್‍ಗಳನ್ನು ಮುದ್ರಿಸುತ್ತೇವೆ. ತಿಂಗಳ ಆಂತ್ಯದೊಳಗೆ ಪ್ರೌಢಶಾಲಾ ವಿದ್ಯಾರ್ಥಿಗಳ ಪಾಸ್‍ಗಳು ಮುದ್ರಣಗೊಳ್ಳುತ್ತವೆ. ಇನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿ ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗಿದ್ದು, ಅದರಲ್ಲಿ ಅವರು ಎಲ್ಲಾ ಮಾಹಿತಿಗಳನ್ನು ದಾಖಲಿಸಿದರೆ ಬಸ್ ಪಾಸ್ ಕಾಲೇಜಿಗೆ ಅಥವಾ ಮನೆಗೆ ನೇರವಾಗಿ ತಲುಪಿಸಲಾಗುವುದು ಎಂದರು.

ಪ್ರೌಢಶಾಲೆಯ ಬಾಲಕಿಯರಿಗೆ 600ರೂ. ಬಾಲಕರಿಗೆ 800 ರೂ, ಕಾಲೇಜು ವಿದ್ಯಾರ್ಥಿಗಳು 1100 ರೂ. ಪಾವಿತಿಸಬೇಕು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಂದ ಬಸ್ ಪಾಸ್ ಶುಲ್ಕ ಪಡೆಯುತ್ತಿಲ್ಲ. ಅವರು ಕೇವಲ 200 ಸಂಸ್ಕರಣಾ ಶುಲ್ಕ ಪಾವತಿಸಿದರೆ ಸಾಕು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ 7ನೇ ತರಗತಿವರೆಗೆ ಬಸ್ ಪಾಸ್‍ಗೆ ಯಾವುದೇ ಶುಲ್ಕ ಪಡೆಯುತ್ತಿಲ್ಲ ಎಂದು ಹೇಳಿದರು. ಸಾರಿಗೆ ಇಲಾಖೆಯಲ್ಲಿ ಕೆಲವು ಬದಲಾವಣೆ ಮಾಡುವುದು ಅಗತ್ಯವಿದೆ. ನಮ್ಮ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹಾಗಂತ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಇಲಾಖೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ಕೆಲವು ಮನೆಗಳಲ್ಲಿ 2-3 ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಸಾರ್ವಜನಿಕರು ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸಿದರೆ ಸಂಚಾರ ದಟ್ಟಣೆ ಸುಧಾರಣೆಗೆ ತರಲು ಸಾಧ್ಯ. ನಗರದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಸಾರ್ವಜನಿಕರು ಸರ್ಕಾರದ ಜತೆ ಕೈಜೋಡಿಸಬೇಕು. ಖಾಸಗಿ ವಾಹನಗಳಿಗೆ ನಿಲ್ದಾಣದ ಸಮಸ್ಯೆ ಇದ್ದರೆ ನಗರದ ಹೊರ ವಲಯದಲ್ಲಿ ನಿಲ್ಲಿಸಿಕೊಳ್ಳಬೇಕೆಂದು ತಿಳಿಸಿದರು.

ಕೆಎಸ್‍ಆರ್‍ಟಿಸಿಗೆ ದೇಶದಲ್ಲೇ ಒಳ್ಳೆಯ ಹೆಸರಿದೆ. ಇನ್ನಷ್ಟು ಉತ್ತಮ ಸೇವೆಯನ್ನು ಒದಗಿಸಲು ಪ್ರಯತ್ನಿಸಲಾಗುವುದು. ಬಿಎಂಟಿಸಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೂ, ಸಮಯಕ್ಕೆ ಸರಿಯಾಗಿ ತಲುಪಲಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಹಾಗಾಗಿ ಪ್ರತಿಯೊಬ್ಬರೂ ಸ್ವಂತ ವಾಹನಗಳನ್ನು ಬಳಸುತ್ತಾರೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇದ್ದರೂ ಕಾರುಗಳನ್ನು ಖರೀದಿಸುತ್ತಾರೆ. ಚಿಕ್ಕ ಚಿಕ್ಕ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

Facebook Comments

Sri Raghav

Admin