ಜಯನಗರದಲ್ಲಿ ಬಿಜೆಪಿಗೆ ವಿಲನ್ ಬಿಬಿಎಂಪಿ ಸದಸ್ಯ ಆದ ಎನ್.ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Nagaraj--01
ಬೆಂಗಳೂರು, ಜೂ.13-ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಅವರ ಸೋಲಿಗೆ ಬೈರಸಂದ್ರ ವಾರ್ಡ್‍ನ ಬಿಬಿಎಂಪಿ ಬಿಜೆಪಿ ಸದಸ್ಯ ಎನ್.ನಾಗರಾಜ್ ಅವರೇ ಕಾರಣರಾಗುವ ಮೂಲಕ ಆ ಪಕ್ಷದ ವಿಲನ್ ಆಗಿದ್ದಾರೆ. ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಅವರ ಅಕಾಲಿಕ ನಿಧನದ ನಂತರ ನಮ್ಮಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಆ ಕ್ಷೇತ್ರದ ಆರು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು.

ಹೀಗೆ ಪಟ್ಟು ಹಿಡಿದವರಲ್ಲಿ ಮಾಜಿ ಮೇಯರ್ ಎಸ್.ಕೆ.ನಟರಾಜ್, ಬೈರಸಂದ್ರ ವಾರ್ಡ್‍ನ ಸದಸ್ಯ ಎನ್.ನಾಗರಾಜ್, ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಪ್ರಮುಖರು.ಆದರೆ ಬಿಜೆಪಿ ಹೈಕಮಾಂಡ್ ಕೊನೆ ಗಳಿಗೆಯಲ್ಲಿ ಬಿ.ಎನ್.ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಿತ್ತು.
ಪಕ್ಷದ ಈ ತೀರ್ಮಾನದಿಂದ ಪ್ರಮುಖ ಆಕಾಂಕ್ಷಿಗಳು ಅಸಮಾಧಾನಗೊಂಡು ಪ್ರಹ್ಲಾದ್ ಬಾಬು ಪರ ಪ್ರಚಾರ ಮಾಡಬಾರದೆಂದು ತೀರ್ಮಾನ ಕೈಗೊಂಡು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು.  ಬಿಜೆಪಿ ವಶದಲ್ಲಿದ್ದ ಜಯನಗರವನ್ನು ಮತ್ತೆ ಉಳಿಸಿಕೊಳ್ಳಲೇಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಮಾಜಿ ಡಿಸಿಎಂ ಅರ್.ಅಶೋಕ್ ಅಖಾಡಕ್ಕೆ ಇಳಿದಿದ್ದರು.

ಅಸಮಾಧಾನಗೊಂಡಿದ್ದ ಐವರು ಬಿಬಿಎಂಪಿ ಸದಸ್ಯರು, ಮಾಜಿ ಮೇಯರ್ ಎಸ್.ಕೆ.ನಟರಾಜ್ ಹಾಗೂ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿಯವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದರು.   ಆದರೆ ಭೈರಸಂದ್ರ ವಾರ್ಡ್‍ನ ಎನ್.ನಾಗರಾಜ್, ಅಶೋಕ್ ಹಾಗೂ ಅನಂತಕುಮಾರ್‍ರವರ ಮಾತಿಗೆ ಮನ್ನಣೆ ನೀಡದೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಬಹಿರಂಗವಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.

ನಾಗರಾಜ್ ಅವರ ಈ ನಡೆಯನ್ನು ಬಿಜೆಪಿಯವರು ಗಂಭೀರವಾಗಿ ಪರಿಗಣಿಸಲಿಲ್ಲ. ಅವರ ವಿರುದ್ಧ ವಾಗ್ದಾಳಿ ನಡೆಸಿ ನಮ್ಮ ಪಕ್ಷದಲ್ಲಿದ್ದುಕೊಂಡು ಬೇರೆ ಪಕ್ಷದ ಪರ ಪ್ರಚಾರ ಮಾಡಬಾರದು, ರಾಜೀನಾಮೆ ಕೊಡಲಿ ಎಂದು ಕಟುವಾಗಿ ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದ್ದರು.ಪಕ್ಷದ ವಿರುದ್ಧ ಸಿಡಿದೆದ್ದ ನಾಗರಾಜ್‍ರನ್ನು ಕಡೆಗಣಿಸಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಸೋಲಿಗೆ ಪ್ರಮುಖ ಕಾರಣವಾಗಿದೆ.

ಪ್ರಹ್ಲಾದ್ ಬಾಬು ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ವಿರುದ್ಧ ಕೇವಲ 2887 ಮತಗಳ ಕಡಿಮೆ ಅಂತರದಿಂದ ಸೋತಿದ್ದಾರೆ. ಒಂದು ವೇಳೆ ಅನಂತಕುಮಾರ್ ಮತ್ತು ಅಶೋಕ್, ಐವರು ಬಿಬಿಎಂಪಿ ಸದಸ್ಯರನ್ನು ಸಮಾಧಾನಪಡಿಸಿದಂತೆ ಎನ್.ನಾಗರಾಜ್ ಅವರನ್ನೂ ಸಮಾಧಾನಪಡಿಸಿದ್ದರೆ ಪ್ರಹ್ಲಾದ್ ಗೆಲುವು ಸಾಧಿಸಬಹುದಿತ್ತು. ಬಿಜೆಪಿ ನಾಯಕರ ಈ ನಡೆಯೇ ಈಗ ಅವರದೇ ಪಕ್ಷದ ಸದಸ್ಯನಿಂದಲೇ ಅವರ ಅಭ್ಯರ್ಥಿಗೆ ಸೋಲು ಉಂಟಾಗಿದೆ.

Facebook Comments

Sri Raghav

Admin