ಗೌರಿ ಹತ್ಯೆಗೆ ಸುಪಾರಿ ನೀಡಿದ ಕಿಂಗ್‍ಪಿನ್ ಯಾರು…?

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು, ಜೂ.13- ಅಂತೂ ಇಂತು ಒಂಬತ್ತು ತಿಂಗಳ ನಂತರ ಪತ್ರಕರ್ತೆ ಗೌರಿ ಹಂತಕನನ್ನು ಪತ್ತೆಹಚ್ಚುವಲ್ಲಿ ಎಸ್‍ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಗೌರಿ ಹತ್ಯೆಗೆ ಸುಪಾರಿ ನೀಡಿದ ಕಿಂಗ್‍ಪಿನ್ ಯಾರು ಎನ್ನುವುದು ಮಾತ್ರ ನಿಗೂಢವಾಗಿ ಉಳಿದಿದೆ. ಎಸ್‍ಐಟಿ ಪೊಲೀಸರು ಸಿಂಧಗಿಯಲ್ಲಿ ಬಂಧಿಸಿರುವ ಪರಶುರಾಮನೇ ಗೌರಿ ಲಂಕೇಶ್ ಅವರಿಗೆ ಗುಂಡು ಹಾರಿಸಿದ ಪಾತಕಿ ಎನ್ನುವುದು ಖಚಿತಪಟ್ಟಿದ್ದು, ಆರೋಪಿ ವಿರುದ್ಧ ಸಾಕ್ಷ್ಯಾಧಾರ ಸಂಗ್ರಹಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಸಿಕ್ಕಿಬಿದ್ದಿರುವ ಹಂತಕ ಪರಶುರಾಮ್ ಗೌರಿ ಲಂಕೇಶ್ ಅವರಿಗೆ ಗುಂಡು ಹಾರಿಸಿದ್ದು ನಾನೇ. ಆದರೆ, ನನ್ನನ್ನು ಬೈಕ್‍ನಲ್ಲಿ ಕರೆದೊಯ್ದ ರೈಡರ್ ಯಾರು ಮತ್ತು ಬೈಕ್ ರೈಡರ್‍ಗೆ ಸಾಥ್ ನೀಡಿದ್ದ ಮತ್ತಿಬ್ಬರು ಬೈಕ್ ಸವಾರರ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ.

ಹತ್ಯೆ ನಡೆದಿದ್ದು ಹೀಗೆ:
ಹಿಂದೂ ವಿರೋಧಿ ಧೋರಣೆ ಹಾಗೂ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದ ಗೌರಿ ಲಂಕೇಶ್ ಅವರ ಹತ್ಯೆಗೆ ರೂಪುರೇಷೆ ಸಿದ್ಧವಾಗಿತ್ತು. ಹೀಗಾಗಿ ಗೌರಿ ಹತ್ಯೆ ಹೊಣೆಯನ್ನು ಪರಶುರಾಮ್ ವಾಗ್ಮೋರೆಗೆ ವಹಿಸಲಾಗಿತ್ತು. ಹತ್ಯೆಗೂ ಮುನ್ನ ಒಂದು ವಾರ ಮೊದಲೇ ಬೆಂಗಳೂರು ತಲುಪಿದ್ದ ಪರಶುರಾಮ್ ಗೌರಿ ಲಂಕೇಶ್ ಅವರ ಚಲನ-ವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಗೌರಿ ಅವರನ್ನು ಯಾವುದೇ ಕಾರಣಕ್ಕೂ ಪ್ರಾಣ ಸಹಿತ ಉಳಿಸಲೇಬಾರದು ಎಂಬ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ದಟ್ಟ ಕಾನನದಲ್ಲಿ ಪರಶುರಾಮ್ ಗುಂಡು ಹಾರಿಸುವ ತರಬೇತಿ ಪಡೆದಿದ್ದ ಎನ್ನಲಾಗಿದೆ.

ತರಬೇತಿ ನಂತರ ಆಪರೇಷನ್ ಗೌರಿಗೆ ನಾನು ಸಿದ್ಧ ಎಂದು ಪರಶುರಾಮ್ ಸೂಚನೆ ನೀಡಿದ ನಂತರ ಆತನನ್ನು ಬೆಂಗಳೂರಿಗೆ ಕಳುಹಿಸಲಾಯಿತು. ಸುಮಾರು ಒಂದು ವಾರಗಳ ಕಾಲ ನಗರದಲ್ಲೇ ತಂಗಿದ್ದ ಪರಶುರಾಮನಿಗೆ ನೆರವು ನೀಡಿದ್ದು ನವೀನ್ ಅಲಿಯಾಸ್ ಹೊಟ್ಟೆ ಮಂಜ. ಬಂಧಿತನಾಗಿರುವ ನವೀನ್ ಕಲಾಸಿಪಾಳ್ಯದಲ್ಲಿ ಪಿಸ್ತೂಲು ಮತ್ತು ಗುಂಡು ಖರೀದಿಸಿದ್ದ. ಆತ ಖರೀದಿಸಿದ್ದ ಪಿಸ್ತೂಲನ್ನೇ ಪರಶುರಾಮ್ ಗೌರಿ ಹತ್ಯೆಗೆ ಬಳಸಿರುವುದು ಖಚಿತಪಟ್ಟಿದೆ ಎನ್ನುತ್ತವೆ ಪೊಲೀಸ್ ಮೂಲಗಳು.

ಸುಪಾರಿ ನೀಡಿದವರು ಯಾರು..?
ಮನೋಹರ್ ಎಂಬ ವ್ಯಕ್ತಿಯ ಮೂಲಕ ಮಹಾರಾಷ್ಟ್ರದ ಅಮೋಲ್ ಕಾಳೇ ಸಂಪರ್ಕ ಪಡೆದ ಪರಶುರಾಮ್ ಅವರ ಸೂಚನೆ ಮೇರೆಗೆ ಗೌರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಎಸ್‍ಐಟಿ ಪೊಲೀಸರು ತಿಳಿಸಿದ್ದಾರೆ. ಆದರೆ, ಗೌರಿ ಹತ್ಯೆ ಪ್ರಕರಣದ ಪ್ರಮುಖ ಕಿಂಗ್‍ಪಿನ್ ಯಾರು ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಪರಶುರಾಮ್‍ನ ಕೃತ್ಯಕ್ಕೆ ಸಹಕರಿಸಿದ ಬೈಕ್ ರೈಡರ್ ಹಾಗೂ ಅವರನ್ನು ಹಿಂಬಾಲಿಸಿಕೊಂಡು ಬಂದ ಮತ್ತಿಬ್ಬರು ಆಗಂತುಕ ಬೈಕ್ ರೈಡರ್‍ಗಳನ್ನು ಬಂಧಿಸಿದ ನಂತರವಷ್ಟೇ ಗೌರಿ ಹತ್ಯೆ ಹಿಂದಿನ ನಿಜವಾದ ಕಿಂಗ್‍ಪಿನ್ ಯಾರು ಎನ್ನುವುದು ಬಯಲಾಗಲಿದೆ.

ಹೋಲಿಕೆ:
ಗೌರಿ ಹತ್ಯೆ ನಂತರ ಆ ಪ್ರದೇಶದ ಸುತ್ತಮುತ್ತ ವಶಪಡಿಸಿಕೊಳ್ಳಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಹಂತಕನ ಅಸ್ಪಷ್ಟ ದೃಶ್ಯಾವಳಿಗಳು ಹಾಗೂ ನಂತರ ಕೆಲವು ಸಾಕ್ಷಿದಾರರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ರಚಿಸಿದ ರೇಖಾಚಿತ್ರಕ್ಕೂ ಈಗ ಸಿಂಧಗಿಯಲ್ಲಿ ಬಂಧಿಸಲಾಗಿರುವ ಪರಶುರಾಮ್ ವಾಗ್ಮೋರೆಗೂ ಹೋಲಿಕೆ ಕಂಡುಬಂದಿದೆ ಎನ್ನುತ್ತಾರೆ ಪೊಲೀಸರು. ಆರು ಮಂದಿ ಸೆರೆ: ಗೌರಿ ಹತ್ಯೆ ಪ್ರಕರಣದ ನಂತರ ಮದ್ದೂರಿನ ನವೀನ್ ಅಲಿಯಾಸ್ ಹೊಟ್ಟೆ ಮಂಜ ಎಂಬುವನನ್ನು ಪೊಲೀಸರು ಸೆರೆ ಹಿಡಿದಿದ್ದರು.

ನಂತರ ವಿಚಾರವಾದಿ ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾದ ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್, ಶಿಕಾರಿಪುರದ ಸುಜಿತ್‍ಕುಮಾರ್ ಹಾಗೂ ವಿಜಯಪುರದ ಮನೋಹರ್ ಯಡವೆ ಎಂಬ ನಾಲ್ವರನ್ನು ಎಸ್‍ಐಟಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದರು.  ತದನಂತರ ಖಚಿತ ಮಾಹಿತಿ ಆಧರಿಸಿ ಹತ್ಯೆಯ ಪ್ರಮುಖ ರೂವಾರಿ ಪರಶುರಾಮ್ ವಾಗ್ಮೋರೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Facebook Comments

Sri Raghav

Admin