ಆತ್ಮಾವಲೋಕನಾ ಸಭೆ ಮಹದೇವಪ್ಪ ಗೈರು, ಕಾಂಗ್ರೆಸ್‍ನಲ್ಲಿ ಏನೂ ಸರಿಯಾಗಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

H-C-Mahadevappa--01
ಮೈಸೂರು, ಜೂ.13-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಆತ್ಮಾವಲೋಕನಾ ಸಭೆಗೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಗೈರು ಹಾಜರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಗರದ ಖಾಸಗಿ ಹೊಟೇಲ್‍ನಲ್ಲಿಂದು ನಡೆಯುತ್ತಿರುವ ಆತ್ಮಾವಲೋಕನ ಸಭೆಯಲ್ಲಿ ಕಾಂಗ್ರೆಸ್‍ನ ಮುಖಂಡರೂ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ಮಹದೇವಪ್ಪ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.  ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲನನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಗರದ ಖಾಸಗಿ ಹೊಟೇಲ್‍ನಲ್ಲಿ ಸೋತ ಅಭ್ಯರ್ಥಿಗಳ ಆತ್ಮಾವಲೋಕನ ಸಭೆ ನಡೆಯಿತು.

ಸಭೆಯಲ್ಲಿ ಕೃಷ್ಣರಾಜ, ಚಾಮರಾಜ, ನಂಜನಗೂಡು, ಹುಣಸೂರು, ಗುಂಡ್ಲುಪೇಟೆ ಸೇರಿದಂತೆ ಹಲವು ಕ್ಷೇತ್ರಗಳ ಅಭ್ಯರ್ಥಿಗಳು ಭಾಗವಹಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿದ್ದ ಟಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಮಹದೇವಪ್ಪ ಅವರು ಸಭೆಗೆ ಬಾರದಿರುವುದು ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುವಂತಿದೆ.ನಿನ್ನೆ ಮೈಸೂರಿನಲ್ಲಿ ವರುಣಾ ಕ್ಷೇತ್ರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಸಿದ್ದರಾಮಯ್ಯ, ಯತೀಂದ್ರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ಆಗಲೂ ಸಹ ಮಹದೇವಪ್ಪ ಆಗಮಿಸಿರಲಿಲ್ಲ. ಇಂದಿನ ಆತ್ಮಾವಲೋಕನ ಸಭೆಯಲ್ಲಾದರೂ ಪಾಲ್ಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ಅವರು ಗೈರು ಹಾಜರಾಗಿರುವುದರಿಂದ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ನಡುವಿನ ಸಂಬಂಧ ಸರಿಯಾಗಿದೆಯೇ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.

Facebook Comments

Sri Raghav

Admin