ವಿಧಾನಪರಿಷತ್ ಚುನಾವಣೆ ಫಲಿತಾಂಶ, ಬಿಜೆಪಿ 3, ಜೆಡಿಎಸ್ 2, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Parishat--01

ಬೆಂಗಳೂರು, ಜೂ.13-ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ 3, ಜೆಡಿಎಸ್ 2 ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಬೆಂಗಳೂರು ಪದವೀಧರ ಆಗ್ನೇಯ ಶಿಕ್ಷಕರ, ನೈರುತ್ಯ ಪದವೀಧರ ಕ್ಷೇತ್ರಗಳು ಬಿಜೆಪಿ ಪಾಲಾದರೆ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಈಶಾನ್ಯ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ಮರಿತಿಬ್ಬೇಗೌಡ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ಎಸ್.ಎಲ್.ಬೋಜೇಗೌಡ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಬಿಜೆಪಿ ಅ.ದೇವೇಗೌಡ ಹಾಗೂ ಈಶಾನ್ಯ ಪದವಿಧರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಚಂದ್ರಶೇಖರ್ ಪಾಟೀಲ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

ಆಗ್ನೇಯದಲ್ಲಿ ಬಿಜೆಪಿ:
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯನ್ನೊಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ವೈ.ಎ.ನಾರಾಯಣಸ್ವಾಮಿ ಅವರು ಜೆಡಿಎಸ್‍ನ ರಮೇಶ್ ಬಾಬು ಅವರನ್ನು 2000ಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ.
ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 8479 ಮತಗಳನ್ನು ಪಡೆದರೆ ಜೆಡಿಎಸ್‍ನ ರಮೇಶ್ ಬಾಬು 6607, ಕಾಂಗ್ರೆಸ್‍ನ ಎಂ.ರಾಮಪ್ಪ 1652ಮತಗಳನ್ನು ಪಡೆದಿದ್ದಾರೆ.915 ಮತಗಳು ಅಸಿಂಧುವಾಗಿದ್ದು , ಇನ್ನು 25 ಕೋಟಾ ಮತಗಳು ಚಲಾವಣೆಯಾಗಿದೆ.

ದಕ್ಷಿಣದಲ್ಲಿ ಜೆಡಿಎಸ್:
ಜೆಡಿಎಸ್‍ನ ಭದ್ರಕೋಟೆ ಎನಿಸಿದ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ವಿಧಾನಪರಿಷತ್‍ನ ಹಾಲಿ ಉಪಸಭಾಪತಿ ಜೆಡಿಎಸ್‍ನ ಮರಿತಿಬ್ಬೇಗೌಡ 4ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.  ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ಮರಿತಿಬ್ಬೇಗೌಡ ಅವರು 6003 ಮತಗಳನ್ನು ಪಡೆದರೆ ಕಾಂಗ್ರೆಸ್‍ನ ಎಂ.ಲಕ್ಷ್ಮಣ್ 5514 ಮತಗಳನ್ನು ಪಡೆದರು. ಬಿಜೆಪಿಯ ಎನ್.ನಿರಂಜನ್ ಮೂರ್ತಿ 8ನೇ ಸುತ್ತಿನಲ್ಲೇ ಮತ ಎಣಿಕೆ ಕೇಂದ್ರದಿಂದ ಹೊರನಡೆದರು. ಗೆಲುವಿಗಾಗಿ 7933 ಮತಗಳನ್ನು ನಿಗದಿಪಡಿಸಲಾಗಿತ್ತು. 4ನೇ ಬಾರಿ ಮರಿತಿಬ್ಬೇಗೌಡ ಗೆಲ್ಲುವುದರೊಂದಿಗೆ ಈ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ.

ಅಚ್ಚರಿಯ ಗೆಲುವು:
ಬಿಜೆಪಿಯ ಭದ್ರಕೋಟೆ ಎನಿಸಿದ್ದ ನೈರುತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಜೆಡಿಎಸ್‍ನ ಎಸ್.ಎಲ್.ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಗಣೇಶ್ ಕಾರ್ನಿಕ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ಕ್ಷೇತ್ರವನ್ನೊಳಗೊಂಡ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಭೋಜೆಗೌಡ 8647 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಗೆದ್ದೇ ಗೆಲ್ಲುತ್ತೇವೆ ಎಂಬ ಬಿಜೆಪಿಯ ಸ್ಪರ್ಧಿ ಗಣೇಶ್ ಕಾರ್ನಿಕ್‍ಗೆ ಭಾರೀ ಮುಖಭಂಗವಾಗಿದೆ.

ನೈರುತ್ಯದಲ್ಲಿ ಬಿಜೆಪಿ:
ಶಿವಮೊಗ್ಗ , ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ಕ್ಷೇತ್ರವನ್ನೊಳಗೊಂಡ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಯನೂರು ಮಂಜುನಾಥ್ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.   ಬಿಜೆಪಿಯ ಆಯನೂರು ಮಂಜುನಾಥ್ ಅವರು 25250 ಮತಗಳನ್ನು ಪಡೆದರೆ ಕಾಂಗ್ರೆಸ್‍ನ ಎಸ್.ಬಿ.ದಿನೇಶ್ 16000 ಮತಗಳನ್ನು ಪಡೆದರು. ಅಂತಿಮವಾಗಿ ಆಯನೂರು ಮಂಜುನಾಥ್ 9000ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದರು.

ಈಶಾನ್ಯದಲ್ಲಿ ಕಾಂಗ್ರೆಸ್ :
ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ಈಶಾನ್ಯ ಪದವೀಧರ ಕ್ಷೇತ್ರ ಕಾಂಗ್ರೆಸ್ ವಶವಾಗಿದೆ. ಎರಡನೇಯ ಪ್ರಾಶಸ್ತ್ಯದ ಮತ ಎಣಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ ವಿರುದ್ಧ 321 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ನ ಚಂದ್ರಶೇಖರ ಪಾಟೀಲಗೆ 18,768 ಮತಗಳು ಬಿದ್ದಿದ್ದರೆ, ಬಿಜೆಪಿಯ ಕೆ.ಬಿ.ಶ್ರೀನಿವಾಸ್ 18447 ಮತಗಳನ್ನು ಪಡೆದಿದ್ದಾರೆ.
ಮೊದಲ ಸುತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಕೊನೆಗೂ ವಿಜಯಲಕ್ಷ್ಮಿ ಒಲಿದಿದ್ದಾಳೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ಈಶಾನ್ಯ ಪದವೀಧರ ಕ್ಷೇತ್ರ ಪ್ರಥಮ ಬಾರಿಗೆ ಕಾಂಗ್ರೆಸ್ ವಶವಾಗಿದೆ.

ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯ್ರರ್ಥಿ ಚಂದ್ರಶೇಖರ್ ಪಾಟೀಲ್, ಎರಡನೆಯ ಪ್ರಾಶಸ್ತ್ಯದ ಮತ ಎಣಿಕೆಯ ಅಂತಿಮ ಸುತ್ತಿನಲ್ಲಿ 321 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಚಂದ್ರಶೇಖರ ಪಾಟೀಲ 18,768 ಮತಗಳನ್ನು ಪಡೆದರೆ, ಬಿಜೆಪಿಯ ಕೆ.ಬಿ.ಶ್ರೀನಿವಾಸ್ 18,447 ಮತಗಳನ್ನು ಪಡೆದರು.

ಪ್ರಾಶಸ್ತ್ಯದ ಮತದಾನವಾಗಿರುವುದರಿಂದಾಗಿ ಅಭ್ಯರ್ಥಿಯ ಗೆಲುವಿಗೆ 24, 414 ಮತಗಳನ್ನು ನಿಗದಿಗೊಳಿಸಲಾಗಿತ್ತು. ಆದರೆ ದ್ವಿತೀಯ ಪ್ರಾಶಸ್ತ್ಯ ಮತ ಎಣಿಕೆಯ ಕೊನೆಯ ಸುತ್ತಿನಲ್ಲಿಯೂ ನಿಗದಿಗೊಳಿಸಿದ ಮತ ಸಿಗದೇ ಇದ್ದ ಹಿನ್ನೆಲೆಯಲ್ಲಿ 321 ಮತಗಳ ಅಂತರದ ಮುನ್ನಡೆ ಪಡೆದಿದ್ದ ಕಾಂಗ್ರೆಸ್ ನ ಚಂದ್ರಶೇಖರ ಪಾಟೀಲರನ್ನು ಚುನಾವಣಾಧಿಕಾರಿ ಪಂಕಜ್‍ಕುಮಾರ್ ಪಾಂಡೆ ವಿಜೇತ ಅಭ್ಯರ್ಥಿ ಎಂದು ಘೋಷಿಸಿದರು.

ಕ್ಷೇತ್ರ ಉಳಿಸಿಕೊಂಡ ಬಿಜೆಪಿ:
ಇನ್ನು ಬೆಂಗಳೂರು ಪದವೀಧರ ಕ್ಷೇತ್ರ ಈ ಬಾರಿಯೂ ಬಿಜೆಪಿಯ ಪಾಲಾಗಿದೆ. ಬೆಂಗಳೂರು ನಗರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಒಳಗೊಂಡ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಅ.ದೇವೇಗೌಡ ಅವರು 3702 ಮತಗಳ ಅಂತರದಿಂದ ಕಾಂಗ್ರೆಸ್‍ನ ರಾಮೋಜಿ ಗೌಡ ಅವರನ್ನು ಪರಾಭವಗೊಳಿಸಿದ್ದಾರೆ. ಈ ಹಿಂದೆ ಈ ಕ್ಷೇತ್ರದಿಂದ ಬಿಜೆಪಿಯ ರಾಮಚಂದ್ರಗೌಡ ಅವರು ಪ್ರತಿನಿಧಿಸುತ್ತಿದ್ದರು. ಈ ಬಾರಿ ಅ.ದೇವೇಗೌಡ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು.

Facebook Comments

Sri Raghav

Admin