ಎನ್‍ಕೌಂಟರ್’ನಲ್ಲಿ ಇಬ್ಬರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Border-Firing--01

ಜಮ್ಮು, ಜೂ.14- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಒಂದೆಡೆ ಪಾಕಿಸ್ತಾನಿ ಯೋಧರ ಉದ್ಧಟತನ ಹಾಗೂ ಇನ್ನೊಂದೆಡೆ ಉಗ್ರರ ಉಪಟಳ ತೀವ್ರಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಇಂದು ನಡೆದ ಎನ್‍ಕೌಂಟರ್‍ನಲ್ಲಿ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಪನಾರ್ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ವಕ್ತಾರರೊಬ್ಬರು ಶ್ರೀನಗರದಲ್ಲಿ ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.

ಈ ಪ್ರದೇಶದಲ್ಲಿ ಅಡಗಿರಬಹುದಾದ ಉಗ್ರಗಾಮಿಗಳಿಗಾಗಿ ತೀವ್ರ ಶೋಧ ಮುಂದುವರಿದಿದೆ. ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ನಿನ್ನೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಅಧಿಕಾರಿಯೊಬ್ಬರು ಸೇರಿದಂತೆ ಗಡಿ ಭದ್ರತಾ ಪಡೆ(ಬಿಎಸ್‍ಎಫ್)ಯ ನಾಲ್ವರು ಯೋಧರು ಹುತಾತ್ಮರಾಗಿದ್ದರು.

ಜೂನ್ 3ರಂದು ಅಂತಾರಾಷ್ಟ್ರೀಯ ಗಡಿಯ ಪ್ರಗ್ವಲ್. ಕಾನಾಚಕ್ ಮತ್ತು ಖೌರ್ ವಲಯಗಳಲ್ಲಿ ಪಾಕಿಸ್ತಾನಿ ರೇಂಜರ್‍ಗಳು ಭಾರೀ ಶೆಲ್ ಮತ್ತು ಗುಂಡಿನ ದಾಳಿ ನಡೆಸಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಸೇರಿದಂತೆ ಇಬ್ಬರು ಬಿಎಸ್‍ಎಫ್ ಯೋಧರನ್ನು ಕೊಂದು 10ಕ್ಕೂ ಹೆಚ್ಚು ಗ್ರಾಮಸ್ಥರನ್ನು ಗಾಯಗೊಳಿಸಿದ್ದರು.  ಮೇ 29ರಂದು ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳ ನಡುವೆ 2003ರ ಕದನ ವಿರಾಮವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಮ್ಮತಿ ನೀಡಲಾಗಿತ್ತು. ಆದರೆ ಪಾಕ್ ಎರಡು ಬಾರಿ ನಿಯಮ ಉಲ್ಲಂಘಿಸಿ ಉದ್ಧಟತನ ಪ್ರದರ್ಶಿಸಿದೆ.

Facebook Comments

Sri Raghav

Admin