ನಾಳೆ ರಾಜ್ಯಾದ್ಯಂತ ‘ಅಮ್ಮ ಐ ಲವ್ ಯು’ ಚಿತ್ರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Amma-ILoveYou-Kannada-Mov-1

ತಾಯಿಗಿಂತ ಮಿಗಿಲಾದ ದೇವರಿಲ್ಲ ಅನ್ನೋ ಮಾತು ಎಲ್ಲರಿಗೂ ತಿಳಿದೇ ಇದೆ. ಅಂತಹ ತಾಯಿ-ಮಗನ ಪ್ರೀತಿ ಬಾಂಧವ್ಯದ ಚಿತ್ರ ಈ ವಾರ ತೆರೆ ಮೇಲೆ ರಾರಾಜಿಸಲಿದೆ.   ಆ ದಿನಗಳು ಖ್ಯಾತಿಯ ಕೆ.ಎಂ. ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಿತ್ರ ಅಮ್ಮ ಐ ಲವ್ ಯು ಈ ವಾರ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇತ್ತೀಚೆಗೆ ತನ್ನ ಹಾಡಿನಿಂದಲೇ ದೊಡ್ಡದಾಗಿ ಸದ್ದು ಮಾಡುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಲುಂಡ ತವರು ಖ್ಯಾತಿಯ ನಟಿ ಸಿತಾರಾ ಈ ಚಿತ್ರದಲ್ಲಿ ನಾಯಕನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕನಾಗಿ ಚಿರಂಜೀವಿ ಸರ್ಜಾ ಅಭಿನಯಿಸಿದ್ದಾರೆ.

ಈ ಚಿತ್ರದ ಮಧುರವಾದ ಹಾಡುಗಳಿಗೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡುವ ಮೂಲಕ ಮತ್ತೊಂದು ಮ್ಯೂಸಿಕಲ್ ಮೆಲೋಡಿ ಆಲ್ಬಂವೊಂದನ್ನು ಕನ್ನಡಕ್ಕೆ ನೀಡಿದ್ದಾರೆ. ಚಿತ್ರದ ನಾಯಕ ಚಿರಂಜೀವಿ ಸರ್ಜಾ ಹೇಳುವ ಹಾಗೆ ಅಮ್ಮ ಐ ಲವ್ ಯು ಸಿನಿಮಾ ನನಗೆ ತುಂಬಾ ಸ್ಪೆಷಲ್. ಏಕೆಂದರೆ ಆರಂಭದಲ್ಲಿ ನಾನು ಈ ಪಾತ್ರವನ್ನು ನನಗೆ ಸೂಟ್ ಆಗಲ್ಲ ಎಂದು ಒಪ್ಪಿರಲಿಲ್ಲ. ಈಗ ಬಿಟ್ಟಿದ್ದರೆ ಎಂಥ ತಪ್ಪು ಮಾಡುತ್ತಿದ್ದೆ ಎನಿಸುತ್ತಿದೆ. ಈ ಚಿತ್ರದ ಪಾತ್ರಕ್ಕಾಗಿ ಮಂಗಳೂರಿನ ರೋಡ್‍ನಲ್ಲಿ ಕೂತು ಭಿಕ್ಷೆ ಬೇಡಿದ್ದೇನೆ, ತಾಯಿಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧನಾಗುವ ಮಗನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ. ನಾಯಕಿ ನಿಶ್ವಿಕಾ ಮಾತನಾಡುತ್ತ ಇದು ನನಗೆ ತುಂಬಾ ಸ್ಪೆಷಲ್ ಚಿತ್ರ. ವಿಭಿನ್ನ ಪಾತ್ರಕ್ಕಾಗಿ ಕಾಯುತ್ತಿರುವ ನನಗೆ ಈ ಚಿತ್ರ ಒಂದು ಹೊಸ ರೂಪವನ್ನು ನೀಡುತ್ತದೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಖಂಡಿತ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಸುವಂತಹ ಪಾತ್ರ ಮಾಡುವ ಆಸೆ ನನ್ನದು ಎಂದು ಹೇಳಿಕೊಂಡರು.

ಅಮ್ಮ ಐ ಲವ್ ಯು ಒಂದು ಸಂಗೀತಮಯ ಸಿನಿಮಾ ಆಗಿದ್ದು, ಈ ಚಿತ್ರಕ್ಕಾಗಿ ಗುರುಕಿರಣ್ ಅವರು ಸಾಕಷ್ಟು ಶ್ರಮವಹಿಸಿ ಹಾಡುಗಳನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಎಲ್ಲಾ ಹಾಡುಗಳು ಅತ್ಯುತ್ತಮವಾಗಿ ಮೂಡಿ ಬಂದಿವೆ. ಅಲ್ಲದೆ, ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಿವೆ. ವಿಶೇಷವಾಗಿ ಚಿತ್ರದ ನಾಲ್ಕೂ ಹಾಡುಗಳು ಹಿನ್ನೆಲೆಯಲ್ಲಿ ಬರುವಂಥವಾಗಿವೆ. ಅಮ್ಮ ನನ್ನ ಈ ಜನ್ಮ ವರದಾನವಮ್ಮ ಎಂಬ ಹಾಡು ಭಾವನಾತ್ಮಕವಾಗಿ ಮೂಡಿಬಂದಿದ್ದು ಈ ಹಾಡಿಗೆ ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈ ಹಾಡು ಎಲ್ಲಾ ಕಡೆ ವೈರಲ್ ಆಗಿದೆ.  ದ್ವಾರಕೀಶ್ ಚಿತ್ರ ಬ್ಯಾನರ್ ಅಡಿಯಲ್ಲಿ ಅಮ್ಮ ಐ ಲವ್ ಯು ಚಿತ್ರವನ್ನು ಯೋಗಿ ದ್ವಾರಕೀಶ್ ಅವರು ನಿರ್ಮಾಣ ಮಾಡಿದ್ದಾರೆ. ಈ ಬ್ಯಾನರ್‍ನಲ್ಲಿ ಹೊರಬರುತ್ತಿರುವ 51ನೇ ಚಿತ್ರವಾಗಿದೆ. ಈ ಚಿತ್ರವು ತಮಿಳಿನ ಪಿಚ್ಚಕಾರನ್ ಚಿತ್ರದ ರೀಮೇಕ್ ಆಗಿದ್ದು, ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬೆಳ್ಳಿ ಪರದೆ ಮೇಲೆ ಬರುತ್ತಿದೆ. ಇನ್ನೇನಿದ್ದರೂ ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು.

Facebook Comments

Sri Raghav

Admin