ನಾಳೆ ಅತೃಪ್ತ ಶಾಸಕರ ಸಭೆ, ಬಂಡಾಯದ ಬಾವುಟ ಹಾರಿಸಲು ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Atruptaru-Congress

ಬೆಂಗಳೂರು, ಜೂ.14-ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂದು ಪಟ್ಟುಹಿಡಿದಿರುವ ಕಾಂಗ್ರೆಸ್ ಶಾಸಕರು ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ. ನಾಳೆ ಅತೃಪ್ತ ಶಾಸಕರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಅತೃಪ್ತ ನಾಯಕ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸತೀಶ್ ಜಾರಕಿಹೊಳಿ, ಡಾ.ಕೆ.ಸುಧಾಕರ್ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ನಾಳೆ ನಡೆಯಲಿರುವ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ನಾಯಕರಿಗೆ ಎಂ.ಬಿ.ಪಾಟೀಲ್ ಆಹ್ವಾನ ನೀಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ರಿಜ್ವಾನ್ ಹರ್ಷದ್ ಸೇರಿದಂತೆ ಅನೇಕರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಮಾಡಿ ತಮ್ಮ ಜತೆಯಲ್ಲಿರುವವರಿಗೆ ಸಚಿವ ಸ್ಥಾನ ನೀಡಬೇಕು. ಉಳಿದ ಶಾಸಕರಿಗೆ ನಿಗಮ-ಮಂಡಳಿ ಹಂಚಿಕೆ ಮಾಡಬೇಕು. ಇನ್ನು ಮುಂದೆ ಇಂತಹ ನಿರ್ಧಾರ ಕೈಗೊಳ್ಳುವಾಗ ನಮ್ಮನ್ನು ಕಡೆಗಣಿಸದಂತೆ ರಾಜ್ಯ ವರಿಷ್ಠರು ಹಾಗೂ ಹೈಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆ ಮಾಡುವ ನಿಟ್ಟಿನಲ್ಲಿ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಕೂಡ ಚರ್ಚೆ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಕಾಂಗ್ರೆಸ್‍ನ ಅತೃಪ್ತ ಶಾಸಕರ ನಾಳಿನ ಸಭೆ ತೀವ್ರ ಕುತೂಹಲ ಪಡೆದುಕೊಂಡಿದೆ. ಇಂದು ಸಂಜೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಈ ಬೆನ್ನಲ್ಲೇ ಅತೃಪ್ತರ ಬಣ ನಾಳೆ ಪ್ರತ್ಯೇಕ ಸಭೆ ನಡೆಸಲಿರುವುದರಿಂದ ಯಾವ ರಾಜಕೀಯ ತಿರುವು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾದ ಭಿನ್ನಮತ ಒಂದು ಹಂತದಲ್ಲಿ ಬಗೆಹರಿದು ಸರ್ಕಾರ ಟೇಕಾಫ್ ಆಗಿ ಕಾರ್ಯಾರಂಭವಾಗಿದೆ. ಈ ಬೆನ್ನಲ್ಲೇ ಇಂತಹ ಪ್ರಕ್ರಿಯೆಗಳು ಮತ್ತೆ ತಲೆ ಎತ್ತುತ್ತಿವೆಯೇ ಎಂಬ ಆತಂಕ ಶುರುವಾಗಿದೆ. ಮುಂಬರುವ ಲೋಕಸಭೆ ಚುನಾವಣೆ, ಪಕ್ಷ ಸಂಘಟನೆ, ರಾಜ್ಯದ ಅಭಿವೃದ್ಧಿ ದೃಷ್ಟಿ ಹಿನ್ನೆಲೆಯಲ್ಲಿ ಇಂತಹ ಎಲ್ಲ ಬೆಳವಣಿಗೆಗಳಿಗೆ ವರಿಷ್ಠರು ಕಡಿವಾಣ ಹಾಕಬೇಕಿದೆ.

Facebook Comments

Sri Raghav

Admin