ಮಲೆನಾಡು, ಕೊಡಗಿನಲ್ಲಿ ಜಲಪ್ರಳಯ

ಈ ಸುದ್ದಿಯನ್ನು ಶೇರ್ ಮಾಡಿ

kodaku-rain-1

ಬೆಂಗಳೂರು, ಜೂ.14-ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡು ಮಂಗಳೂರು, ಕೊಡಗು, ಚಿಕ್ಕಮಗಳೂರು,ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.  ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡು ಹಲವು ಸಂಪರ್ಕ ಕಲ್ಪಿಸುವ ಮಾರ್ಗಗಳು, ಸೇತುವೆಗಳು ತುಂಬಿ ಹರಿಯುತ್ತಿವೆ.
ಇಂದು ದಕ್ಷಿಣ ಕನ್ನಡದ ಹಲವೆಡೆ ಹಾನಿಗೊಳಗಾಗಿರುವ ಸ್ಥಳಗಳಿಗೆ ಸಚಿವರಾದ ಆರ್.ವಿ.ದೇಶಪಾಂಡೆ, ಯು.ಟಿ. ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಶಾಲಾಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

kodaku-rain-1

ಕೆಲವೆಡೆ 5 ಅಡಿಗಿಂತ ಹೆಚ್ಚು ನೀರು ರಸ್ತೆಯಲ್ಲಿ ನಿಂತಿರುವುದರಿಂದ ತಲಕಾವೇರಿಯಂತಹ ಪ್ರಮುಖ ಸ್ಥಳಗಳಿಗೂ ನಿಷೇಧ ಹೇರಲಾಗಿದೆ.  ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು,ಕಳಸಾ-ಹೊರನಾಡು ಸಂಪರ್ಕ ಬಂದ್ ಆಗಿದೆ.  ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಯಲ್ಲಿ ಮೂಡಿಗೆರೆಯ ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆಯೇ ಕಾಣದಷ್ಟು ನೀರು ಹರಿಯುತ್ತಿರುವುದರಿಂದ ಹೊರನಾಡು ಮತ್ತು ಕಳಸಾ ನಡುವಿನ ಸಂಪರ್ಕ ಇಲ್ಲದಂತಾಗಿದೆ.  ಅಪಾಯದ ಮಟ್ಟ ಮೀರಿರುವುದರಿಂದ ಖಾಸಗಿ ಬಸ್ ಹಾಗೂ ಪ್ರವಾಸಿ ವಾಹನಗಳಿಗೆ ಸಂಚಾರ ಸಾಧ್ಯವಾಗದೆ ಹೋಗಿದ್ದು, ನದಿಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

ಶೃಂಗೇರಿ: ದೇವಾಲಯದ ಮೆಟ್ಟಿಲವರೆಗೂ ತುಂಗಾ ನದಿ ನೀರು ಆವರಿಸಿದ್ದು, ಬಹಳಷ್ಟು ಕಡೆ ರಸ್ತೆಗಳೆಲ್ಲ ನೀರಿನಲ್ಲಿ ಮುಳುಗಿ ನದಿಯಂತಾಗಿದೆ.  ಕಪ್ಪೆ ಶಂಕರ ದೇವಾಲಯ ಮಳೆಗೆ ಮುಳುಗಡೆ ಯಾಗಿದ್ದು, ಇಲ್ಲಿನ ಸಂಧ್ಯಾವನ ಮಂಟಪವು ನೀರಿನಲ್ಲಿ ಮುಳುಗಿದೆ. ನೆರೆ ಉಂಟಾಗುವ ಭೀತಿ ಎದುರಾಗಿದೆ.
ಮಂಗಳೂರು: ಶೃಂಗೇರಿ ಹೆದ್ದಾರಿ 169ರಲ್ಲಿ ಮುರುವಿನಕೊಂಬೆ ಸಮೀಪದ ರಸ್ತೆ ಮೇಲೆ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತವಾಗಿದೆ. ಹೀಗಾಗಿ ಚಿಕ್ಕಮಗಳೂರು ಮತ್ತು ಮಂಗಳೂರು ನಡುವಿನ ಬದಲಿ ಮಾರ್ಗವು ಬಂದ್ ಆದಂತಾಗಿದೆ.  ಕಳಸಾದ ನೆಲ್ಲಿವೀಡು ಸೇತುವೆ ಮುಳುಗಿದ್ದು,150 ಅಡಿ ಎತ್ತರದ ಈ ಸೇತುವೆ ಇತಿಹಾಸದಲ್ಲೇ ಮೊದಲ ಬಾರಿ ಮುಳುಗಿರುವುದರಿಂದ ಒಂದು ಕಿ.ಮೀ ವರೆಗಿನ ವಾಹನ ಸಂಚಾರ ಸಾಧ್ಯವಾಗದೆ ವಾಹನಗಳು ಸಾಲುಗಟ್ಟಿ ನಿಂತಿವೆ.
ದಕ್ಷಿಣ ಕನ್ನಡ: ಸೂಳ್ಯ, ಪುತ್ತೂರು, ಬೆಳ್ತಂಗಡಿ ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಫಲ್ಗುಣಿ ನದಿಯಲ್ಲಿ ನೀರು ಹೆಚ್ಚಾಗಿ ವೇಣೂರಿನ ಮೂಡಬಿದರೆ ಗುರುವಾಯನ ಕೆರೆ ರಸ್ತೆಗೆ ನೀರು ತುಂಬಿದೆ.
ಕೊಡಗು: ಕೊಡಗಿನಲ್ಲಿ ತಲಕಾವೇರಿಗೆ ಪ್ರವಾಸಿಗರು ತೆರಳದಂತೆ ನಿಷೇಧ ಹೇರಲಾಗಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

Facebook Comments