ಚುನಾವಣೆಯಲ್ಲಿ ನಿರೀಕ್ಷತ ಫಲಿತಾಂಶ ಬರದಿದ್ದಕ್ಕೆ ಬೇಸರವಾಗಿದೆ : ಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda-JDS

ಬೆಂಗಳೂರು, ಜೂ.14- ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷತ ಫಲಿತಾಂಶ ಬರಲಿಲ್ಲ. ಇದರಿಂದ ನಿರಾಸೆಯಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದರು. ನಗರದ ಪಕ್ಷದ ಕಚೇರಿ ಜೆಪಿಭವನದಲ್ಲಿ ಇಂದು ಮಧ್ಯಾಹ್ನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಹಾಗೂ ಶಾಸಕರೊಂದಿಗೆ ಸಭೆ ನಡೆಸಿ, ಚುನಾವಣೆಯ ಸೋಲು-ಗೆಲುವಿನ ಬಗ್ಗೆ ಅವಲೋಕನ ಮಾಡಿ ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಜೊತೆ ಸೇರಿದರೂ ನಮಗೆ 38 ಸ್ಥಾನ ಬಂದಿದೆ. ಹಾಗಾಗಿ ಈಗಿನಿಂದಲೇ ಪಕ್ಷ ಸಂಘಟನೆ ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಾದರೂ ಹೆಚ್ಚು ಸ್ಥಾನ ಗಳಿಸಲು ಸಂಘಟಿತರಾಗಿ ಎಂದು ಸಲಹೆ ನೀಡಿದರು. ಬಿಜೆಪಿ ಜೊತೆ ಹೋದರೆ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ್ದೆ. ಆದರೂ ಜನ ನಮ್ಮನ್ನು ನಂಬಲಿಲ್ಲ. ಚುನಾವಣೆ ಪೂರ್ವದಲ್ಲಿ ಪ್ರಚಾರಕ್ಕೆ ಹೋದೆಡೆಯೆಲ್ಲ ಜನ ಹೆಚ್ಚಾಗಿ ಸೇರುತ್ತಿದ್ದರು. ಆದರೆ ಇದು ಮತಗಳಾಗಿ ಪರಿವರ್ತನೆಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೋತಿರುವ ಅಭ್ಯರ್ಥಿಗಳು ವಿಚಲಿತರಾಗದೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ದಿಗೆ ಆದ್ಯತೆ ನೀಡಿ ಜನರ ವಿಶ್ವಾಸ ಗಳಿಸುವ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದು ಹೇಳಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋತಿದ್ದ ಹಲವು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಕುಟುಂಬದಲ್ಲಿ ಕಲಹವಿದೆ ಎಂದು ಬಿಂಬಿಸಬೇಡಿ:
ನಾನು ಇರುವ ತನಕ ಹಾಗೂ ನಂತರವೂ ನಮ್ಮ ಕುಟುಂಬ ಒಂದೇಯಾಗಿಯೇ ಇರುತ್ತದೆ. ಆದರೆ ಮಾಧ್ಯಮಗಳು ನಮ್ಮ ಕುಟುಂಬದಲ್ಲಿ ಕಲಹ ಇದೆ ಎಂಬು ಬಿಂಬಿಸುತ್ತಾರೆ. ದಯವಿಟ್ಟು ಹಾಗೆ ಮಾಡಬೇಡಿ ಎಂದು ಇದೇ ವೇಳೆ ದೇವೇಗೌಡರು ಮಾಧ್ಯಮದವರಿಗೆ ಹೇಳಿದರು. ರೇವಣ್ಣ , ಭವಾನಿ ಬೇರೆ ಹೋಗಿಯೇ ಬಿಟ್ಟರು. ಹೀಗೆ ಇನ್ನು ಏನೇನೋ ಸುದ್ದಿಯನ್ನು ಪ್ರಸಾರ ಮಾಡುತ್ತಿದುದನ್ನು ನೋಡಿ ನೋಡಿ ನಾನು ಸಾಕಾಗಿದ್ದೇನೆ. ನಮ್ಮ ಕುಟುಂಬದಲ್ಲಿ ಒಡಕಿದೆ ಎಂದು ಸುದ್ದಿ ಮಾಡಬೇಡಿ ನಮ್ಮ ಕುಟುಂಬ ಎಂದಿಗೂ ಒಂದಾಗಿರುತ್ತದೆ ಎಂದರು.

ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳ ಜೊತೆ ಈ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವ ಅನಿವಾರ್ಯತೆ ಇದೆ ಎಂದು ಹೇಳಿದರು. ಸರ್ಕಾರ ಬಿದ್ದು ಹೋಗುತ್ತದೆ ಎಂಬ ಮಾತು ಪ್ರತಿನಿತ್ಯ ಕೇಳಿಬರುತ್ತಿದೆ. ಆದರೆ ಇದು ಆಗದ ಮಾತು. ಸರ್ಕಾರ ರಚನೆಯಾಗಿ ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬಂದಿದೆ. ಅದು ಹೇಗೆ ಬಿದ್ದು ಹೋಗುತ್ತದೆ ಎಂದು ಪ್ರಶ್ನಿಸಿದರು. ನಮ್ಮ ಮತ್ತು ಕಾಂಗ್ರೆಸ್ ಜೊತೆ ಈ ಹಿಂದೆ ನಡೆದ ಘರ್ಷಣೆಯನ್ನು ಮರೆತು ಈ ಸರಿದೂಗಿಸಿಕೊಂಡು ಹೋಗಬೇಕಾಗಿದೆ ಎಂದು ಗೌಡರು ಮಾರ್ಮಿಕವಾಗಿ ನುಡಿದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಹೇಗೆ ತಡೆಗಟ್ಟಬೇಕು ಎಂಬ ಬಗ್ಗೆ ಈಗಿನಿಂದಲೇ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು. ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಡಿ.ಸಿ.ತಮ್ಮಣ್ಣ, ಶ್ರೀನಿವಾಸ್, ಸಿ.ಎಸ್. ಪುಟ್ಟರಾಜು, ಸಾ.ರಾ.ಮಹೇಶ್, ಶಾಸಕ ವೀರಭದ್ರಯ್ಯ, ಅಶ್ವಿನ್‍ಕುಮಾರ್, ಮಾಜಿ ಶಾಸಕರಾದ ಪಿ.ಜಿ.ಆರ್.ಸಿಂಧ್ಯಾ, ಬಿ.ಬಿ.ನಿಂಗಯ್ಯ, ಕೋನರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಹಾಜರಿದ್ದರು.

Facebook Comments

Sri Raghav

Admin