BIG BREAKING : ಶಾಸಕ ಹ್ಯಾರಿಸ್ ಪುತ್ರ ನಲಪಾಡ್’ಗೆ ಕೊನೆಗೂ ಸಿಕ್ತು ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Nalapad--01

ಬೆಂಗಳೂರು, ಜೂ.14- ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲ್‍ಪಾಡ್‍ಗೆ ಕೊನೆಗೂ ಹೈಕೋರ್ಟ್ ಜಾಮೀನು ನೀಡಿದೆ. ಜಾಮೀನು ನೀಡುವಂತೆ ಕೋರಿ ಹೈಕೋರ್ಟ್‍ಗೆ ನಲ್‍ಪಾಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ಅವರು 2 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಹಾಗೂ ಸಾಕ್ಷ್ಯ ನಾಶ ಮಾಡಬಾರದು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ವಿದ್ವತ್ ಮೇಲೆ ನಲ್‍ಪಾಡ್ ಹಾಗೂ ಅವರ ಸ್ನೇಹಿತರು ಫರ್ಜಿ ಕೆಫೆಯಲ್ಲಿ ಹಲ್ಲೆ ನಡೆಸಿದ್ದರು. ಈ ಪ್ರಕರಣ ರಾಜ್ಯ ಹಾಗೂ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಚಾರ್ಜ್‍ಶೀಟ್ ಸಲ್ಲಿಸುವ ಮುನ್ನ ನಲ್‍ಪಾಡ್ ಮತ್ತು ಸ್ನೇಹಿತರು ಜಾಮೀನು ಪಡೆಯಲು ನಡೆಸಿದ ಪ್ರಯತ್ನ ವಿಫಲವಾಗಿ ಸುಮಾರು 116 ದಿನಗಳು ಜೈಲಿನಲ್ಲಿ ಕಾಲ ಕಳೆಯುವಂತಾಗಿತ್ತು.

ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೈಕೆಲ್ ಕುನ್ನಾ ಅವರು ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದ್ದಾರೆ. ಅನುಮತಿಯಿಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ. ಕೋರ್ಟ್ ವಿಚಾರಣೆಗೆ ತಪ್ಪದೆ ಹಾಜರಾಗಬೇಕೆಂದು ಸೂಚಿಸಿ ಜಾಮೀನು ನೀಡಿದ್ದಾರೆ.
ನಲ್‍ಪಾಡ್ ಪರ ಬಿ.ವಿ.ಆಚಾರ್ಯ ಹಾಗೂ ಪ್ರಾಸಿಕ್ಯೂಷನ್ ಪರ ವಿಶೇಷ ಅಭಿಯೋಜಕ ಶಾಮಸುಂದರ್ ಅವರು ವಾದ ಮಂಡಿಸಿದ್ದರು.

ನಲ್‍ಪಾಡ್‍ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಸಂಭ್ರಮಾಚರಣೆ ಮಾಡುವುದು ಬೇಡ. ಪಟಾಕಿ ಸಿಡಿಸುವುದಾಗಲಿ, ಮೆರವಣಿಗೆ ಮಾಡುವುದಾಗಲಿ ಮಾಡಬಾರದೆಂದು ಅವರ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಅವರು ನಲ್‍ಪಾಡ್ ಕುಟುಂಬದವರಿಗೆ ಸೂಚನೆ ನೀಡಿದ್ದಾರೆ. ಜೈಲಿನ ಬಳಿ ಗುಂಪುಗೂಡುವುದು, ಪಟಾಕಿ ಸಿಡಿಸಿ ಸಂಭ್ರಮಿಸುವುದು ಮಾಡಬೇಡಿ. ಕುಟುಂಬದವರು ನಾಲ್ಕೈದು ಜನ ತೆರಳಿ ಅವರನ್ನು ಕರೆತನ್ನಿ ಎಂದು ಸಲಹೆ ಮಾಡಿದ್ದಾರೆ. ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

 

Facebook Comments

Sri Raghav

Admin