ಕೇವಲ ಸಿಗರೇಟ್ ವಿಷಯಕ್ಕೆ ಬಿತ್ತು ಹೆಣ…!

ಈ ಸುದ್ದಿಯನ್ನು ಶೇರ್ ಮಾಡಿ

Smoking--01

ಬೆಂಗಳೂರು, ಜೂ.14- ಕೇವಲ 15ರೂ. ಸಿಗರೇಟ್ ಹಣ ನೀಡುವ ವಿಚಾರವಾಗಿ ಅಂಗಡಿ ಮಾಲೀಕನ ಜತೆ ನಡೆದ ಕ್ಷುಲ್ಲಕ ಜಗಳ ಇಬ್ಬರು ಸಹೋದರರ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ರಾತ್ರಿ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೃತ್ತಿಯಲ್ಲಿ ಮೆಕ್ಯಾನಿಕ್‍ಗಳಾಗಿದ್ದ ಗೋವಿಂದಪುರದ ನಿವಾಸಿಗಳಾದ ಮತೀನ್ (32) ಮತ್ತು ಅಮೀನ್ (30) ಕೊಲೆಯಾದ ಸಹೋದರರು. ಕೆಜಿ ಹಳ್ಳಿ ಠಾಣೆಯ ರೌಡಿ ಪಟ್ಟಿಯಲ್ಲಿ ಅಮೀನ್ ಹೆಸರಿದೆ.

ಘಟನೆ ಹಿನ್ನೆಲೆ:
ಗೋವಿಂದಪುರದ ಈರಣ್ಣನಪಾಳ್ಯ ಮುಖ್ಯರಸ್ತೆಯಲ್ಲಿ ಆಲಿ ಎಂಬುವವರಿಗೆ ಸೇರಿದ ಚಿಕ್ಕ ಅಂಗಡಿ ಇದೆ. ರಾತ್ರಿ 9 ಗಂಟೆ ಸಮಯದಲ್ಲಿ ಅಮೀನ್ ಈ ಅಂಗಡಿಗೆ ಹೋಗಿ ಸಿಗರೇಟ್ ತೆಗೆದುಕೊಂಡಿದ್ದಾನೆ. ಈ ವೇಳೆ ಮಾಲೀಕ ಆಲಿ ಹಣ ಕೇಳಿದಾಗ ಹಣ ಇಲ್ಲ, ಆಮೇಲೆ ಕೊಡುತ್ತೇನೆ ಎಂದು ಅಮೀನ್ ಹೇಳಿದ. ಆಗ ಇವರಿಬ್ಬರ ನಡುವೆ ಜಗಳವಾಗಿದೆ. ಜಗಳದ ವೇಳೆ ಅಮೀನ್ ಕೈಯಿಂದ ಆಲಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಲಿ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ದೊಣ್ಣೆಗಳೊಂದಿಗೆ ಬಂದ ಆರೇಳು ಮಂದಿಯ ಗುಂಪು ಅಮೀನ್‍ಗೆ ಥಳಿಸಿದೆ.

ಈ ವಿಷಯ ತಿಳಿದ ಅಮೀನ್ ಅಣ್ಣ ಮತೀನ್ ಸ್ಥಳಕ್ಕೆ ಬಂದು ಜಗಳ ಬಿಡಿಸುವ ವೇಳೆ ಗುಂಪು ಈತನ ಮೇಲೆಯೂ ದೊಣ್ಣೆಗಳಿಂದ ಮನಬಂದಂತೆ ಥಳಿಸಿ ಪರಾರಿಯಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಸಹೋದರರ ಪೈಕಿ ಮತೀನ್‍ನನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಇತ್ತ ನಿಮ್ಹಾನ್ಸ್‍ಗೆ ದಾಖಲಾಗಿದ್ದ ಅಮೀನ್ ಸಹ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸಾವನ್ನಪ್ಪಿದ್ದಾನೆ. ಕೊಲೆ ಬಗ್ಗೆ ಅಮೀನ್, ಮತೀನ್ ಅವರ ತಂದೆ ಕೆಜಿ ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಮೂವರ ಬಂಧನ: ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಜಿ ಹಳ್ಳಿ ಠಾಣೆ ಪೊಲೀಸರು ಜೋಡಿಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ದೊಣ್ಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಬಂದೋಬಸ್ತ್:   ಜೋಡಿ ಕೊಲೆ ನಡೆದ ಗೋವಿಂದಪುರ, ಕೆಜಿ ಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin