ಹಣಕ್ಕಾಗಿ ದೊಡ್ಡಮ್ಮನನ್ನೇ ಉಸಿರುಗಟ್ಟಿಸಿ ಕೊಂದ..!?

ಈ ಸುದ್ದಿಯನ್ನು ಶೇರ್ ಮಾಡಿ

Murder--01
ಬೆಂಗಳೂರು, ಜೂ.15-ವೃದ್ದೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮೈ ಮೇಲಿದ್ದ ಆಭರಣ ಹಾಗೂ ಮನೆಯಲ್ಲಿದ್ದ ಹಣದೊಂದಿಗೆ ದುಷ್ಕರ್ಮಿ ಪರಾರಿಯಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕೊಲೆಯನ್ನು ವೃದ್ದೆಯ ತಂಗಿ ಮಗ ಗಣೇಶ್ ಎಂಬಾತನೇ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಕೈಗೊಂಡಿದ್ದಾರೆ.

ಬಾಗಲೂರು ಬಸ್ ನಿಲ್ದಾಣ ಸಮೀಪ (ಬಾಗಲೂರು ಗ್ರಾಮ)ದಲ್ಲಿ ಮುನಿಯಮ್ಮ (78) ಎಂಬುವರ ಮನೆಯಿದ್ದು, ಇವರು ಒಂಟಿಯಾಗಿ ವಾಸಿಸುತ್ತಿದ್ದರು. ಇವರ ಮಕ್ಕಳು ಬಾಗಲೂರು ಗ್ರಾಮದಲ್ಲೇ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಮನೆ ಸಮೀಪದಲ್ಲೇ ಇದ್ದ ಮುನಿಯಮ್ಮ ಅವರ ತಂಗಿ ರಾತ್ರಿ ವೇಳೆ ಇವರ ಮನೆಗೆ ಬಂದು ಇಲ್ಲೇ ಮಲಗುತ್ತಿದ್ದರು. ಅದರಂತೆ ನಿನ್ನೆ ರಾತ್ರಿ 11.30ರ ಸಮಯದಲ್ಲಿ ಮುನಿಯಮ್ಮ ಮನೆಗೆ ತಂಗಿ ಬಂದಿದ್ದಾಳೆ.

ಬಾಗಿಲು ಹಾಕಿರುವುದನ್ನು ಗಮನಿಸಿ ಮುನಿಯಮ್ಮ ಅವರನ್ನು ಕೂಗಿ ಬಾಗಿಲು ತಟ್ಟಿದ್ದಾರೆ. ಎಷ್ಟು ಹೊತ್ತಾದರೂ ಬಾಗಿಲು ತೆಗೆದಿಲ್ಲ. ತದನಂತರ ಒಳಗಿದ್ದ ಹೆಣ್ಣೂರಿನಲ್ಲಿರುವ ಮತ್ತೊಬ್ಬ ತಂಗಿಯ ಮಗ ಗಣೇಶ್ ಬಾಗಿಲು ತೆಗೆದಿದ್ದಾನೆ. ಈ ವೇಳೆ ಎಲ್ಲೋ ಮುನಿಯಮ್ಮ, ಮಲಗಿದ್ದಾರಾ ಎಂದು ಪ್ರಶ್ನಿಸಿದಾಗ, ಅವರು ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾನೆ. ತಕ್ಷಣ ಒಳಗೆ ಹೋಗಿ ನೋಡಿದಾಗ ಮೂಗಿನಲ್ಲಿ ರಕ್ತ ಬಂದಿರುವುದು ಕಂಡು ಬಂದಿದೆ. ಅಲ್ಲದೆ ಮೈ ಮೇಲಿದ್ದ ಸರ, ಓಲೆ ಜತೆಗೆ ಮನೆಯಲ್ಲಿದ್ದ 15 ಸಾವಿರ ಹಣ ಸಹ ನಾಪತ್ತೆಯಾಗಿರುವುದು ಕಂಡು ಬಂದಿದ್ದು, ತಕ್ಷಣ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ.

ಸಂಬಂಧಿಕರು ಬಂದು ವಿಚಾರಿಸುತ್ತಿದ್ದಂತೆ ಇತ್ತ ಗಣೇಶ ಅಲ್ಲಿಂದ ಪರಾರಿಯಾಗಿದ್ದಾನೆ. ಮುನಿಯಮ್ಮನ ಮೂಗಿನಲ್ಲಿ ರಕ್ತ ಬಂದಿರುವುದನ್ನು ಗಮನಿಸಿ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ವೃದ್ದೆಯನ್ನು ಯಾರೋ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ಮೈಮೇಲಿದ್ದ ಆಭರಣವನ್ನು ತೆಗೆದುಕೊಂಡು ಹೋಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಗಣೇಶ್ ನಾಪತ್ತೆಯಾಗಿದ್ದು, ಈತನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ಆತನಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin