6 ಮಂದಿ ಕುಖ್ಯಾತ ಕಳ್ಳರ ಸೆರೆ, 33.59 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

6-Arrest--01

ಬೆಂಗಳೂರು, ಜೂ.15-ಪಶ್ಚಿಮ ವಿಭಾಗದ ಉಪ್ಪಾರ ಠಾಣೆ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳು ಹಾಗೂ ಕಳ್ಳತನ ಮಾಲು ಸ್ವೀಕರಿಸುತ್ತಿದ್ದ ಇಬ್ಬರನ್ನು ಬಂಧಿಸಿ 29 ಪ್ರಕರಣಗಳನ್ನು ಪತ್ತೆ ಹಚ್ಚಿ 33.59 ಲಕ್ಷರೂ. ಮೌಲ್ಯದ 1 ಕೆಜಿ 120 ಗ್ರಾಂ ತೂಕದ ಚಿನ್ನಾಭರಣ, ಒಂದು ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ.

ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ:
ಐಷಾರಾಮಿ ಜೀವನ ನಡೆಸಲು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬೈಕ್‍ಗಳಲ್ಲಿ ಓಡಾಡುತ್ತ ಸರಗಳ್ಳತನ, ಮೊಬೈಲ್ ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್‍ಕುಮಾರ್ (20), ವಿಶ್ವಾಸ್(20) ಬಂಧಿತ ಆರೋಪಿಗಳಾಗಿದ್ದು, ಇವರ ಬಂಧನದಿಂದ 12 ಸರಗಳ್ಳತನ ಪ್ರಕರಣ, ಒಂದು ಮೊಬೈಲ್ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, 12.24 ಲಕ್ಷ ರೂ. ಬೆಲೆಬಾಳುವ 408 ಗ್ರಾಂ ತೂಕದ ಚಿನ್ನದ ಸರಗಳನ್ನು ಹಾಗೂ ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಉಪ್ಪಾರ ಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಲ್ವರ ಸೆರೆ:
ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬಿಎಂಟಿಸಿ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್‍ಗಳನ್ನು ಕಳವು, ಕನ್ನಗಳವು, ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಹಳೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಾಜ (46), ಗಿರೀಶ್‍ಕುಮಾರ್(26), ಮನುಕುಮಾರ್(29)ಮತ್ತು ಜ್ಯೋತಿ (30) ಬಂಧಿತರು.

ಆರೋಪಿಗಳ ಬಂಧನದಿಂದ ಒಂದು ಕನ್ನಗಳವು, ಒಂದು ಮನೆಗಳವು, 14 ಸಾಮಾನ್ಯ ಕಳವು ಸೇರಿದಂತೆ ಒಟ್ಟು 16 ಪ್ರಕರಣಗಳು ಪತ್ತೆಯಾಗಿದ್ದು, 21.35 ಲಕ್ಷ ಬೆಲೆಬಾಳುವ 712 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ಕಳವು ಮಾಲುಗಳನ್ನು ಸ್ವೀಕರಿಸುತ್ತಿದ್ದ ದೇವರಾಮ್(55) ಮತ್ತು ದಿನೇಶ್‍ಕುಮಾರ್ (27) ಎಂಬುವರನ್ನು ಬಂಧಿಸಲಾಗಿದೆ.  ಪಶ್ಚಿಮ ವಿಭಾಗದ ಉಪಪೊಲೀಸ್ ಕಮೀಷನರ್ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ನಿರಂಜನರಾಜ್ ಅರಸ್ ನೇತೃತ್ವದಲ್ಲಿ ಉಪ್ಪಾರ ಪೇಟೆ ಇನ್ಸ್‍ಪೆಕ್ಟರ್ ಉಮಾಮಹೇಶ್ ಅವರನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಲೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin