ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರಿನಲ್ಲಿ ‘ಸ್ಮಾರ್ಟ್’ ಕಳ್ಳರ ಹಾವಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Smart-Theft

ತುಮಕೂರು, ಜೂ.15-ಸ್ಮಾರ್ಟ್ ಸಿಟಿಯತ್ತ ಹೆಜ್ಜೆ ಹಾಕುತ್ತಿರುವ ತುಮಕೂರಿನಲ್ಲಿ ಇಂದು ಬೆಳಗ್ಗೆ ಸ್ಮಾರ್ಟ್‍ಸಿಟಿ ಹೆಸರು ಹೇಳಿಕೊಂಡು ಸ್ಮಾರ್ಟಾಗಿ ಬಂದ ಕಳ್ಳರ ಗ್ಯಾಂಗ್ ಎರಡು ಮನೆಗಳಿಗೆ ಹೋಗಿ ಬರೋಬ್ಬರಿ 40 ಲಕ್ಷ ಬೆಲೆಬಾಳುವ ಬಂಗಾರ ಕಳ್ಳತನ ಮಾಡಿದ್ದಾರೆ. ಒಂಟಿಯಾಗಿ ವಾಸಿಸುವ ಹಾಗೂ ವೃದ್ಧ ದಂಪತಿ ಇರುವ ಮನೆಗಳನ್ನೇ ಗುರುತಿಸಿ ಈ ಕಳ್ಳರು ಬಹಳ ನಾಜೂಕಾಗಿ ಅವರನ್ನು ಮಾತನಾಡಿಸಿ ಬೆಳ್ಳಂಬೆಳಗ್ಗೆ ಹಣ, ಆಭರಣ ದೋಚಿರುವುದು ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಒಂದು ಪ್ರಕರಣದಲ್ಲಿ ಒಂಟಿಯಾಗಿ ವಾಸವಿದ್ದ ಟಿ.ಮನೋಹರ ಅವರ ಮನೆಯಲ್ಲಿ 40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸಿನಿಮೀಯ ರೀತಿ ಕಳ್ಳತನ ಮಾಡಿದರೆ, ಮತ್ತೊಂದು ಪ್ರಕರಣದಲ್ಲಿ ಕ್ಯಾತ್ಸಂದ್ರ ವ್ಯಾಪ್ತಿಯಲ್ಲಿ ವಾಸವಿರುವ ವೃದ್ಧ ದಂಪತಿ ಮನೆಯಲ್ಲಿ 30 ಸಾವಿರ ಹಣ ಹಾಗೂ ಲಕ್ಷಾಂತರ ಬೆಲೆಬಾಳುವ ಆಭರಣ ಕಳ್ಳತನ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಹೊಸಬಡಾವಣೆ ಠಾಣೆ:
ಬಿ.ಎಚ್.ರಸ್ತೆಯಿಂದ ಕೇವಲ 100 ಮೀಟರ್ ಅಂತರದಲ್ಲಿರುವ ಹಾಗೂ ಠಾಣೆಯ ಕೂಗಳತೆಯಲ್ಲಿರುವ ಸ್ವಂತ ಮನೆಯಲ್ಲಿ ಟಿ.ಡಿ.ಮನೋಹರ (75) ಎಂಬುವರು ಒಂಟಿಯಾಗಿ ವಾಸವಾಗಿ ದ್ದಾರೆ. ಇಂದು ಬೆಳಗ್ಗೆ 6.30ರಲ್ಲಿ ಇಬ್ಬರು ವ್ಯಕ್ತಿಗಳು ಸೂಟುಬೂಟು ಧರಿಸಿಕೊಂಡು ಇವರ ಮನೆಯ ಬಳಿ ಬಂದು ತೆರೆದಿದ್ದ ಬಾಗಿಲು ಮೂಲಕ ಒಳಗೆ ಯಾರಿದ್ದೀರ ಎಂದು ಕೇಳುತ್ತಾ ಹೋಗಿದ್ದಾರೆ. ನಾವು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ನಿಮ್ಮ ಮನೆಯ ಯುಜಿಡಿ ಕನೆಕ್ಷನ್ ನೋಡಬೇಕಿತ್ತು ಎಂದು ಹೇಳಿ ಒಳ ಹೋಗಿದ್ದಾರೆ. ಈ ವೇಳೆ ಒಬ್ಬಾತ ಮನೋಹರ್ ಅವರ ಜೊತೆ ಪರಿಶೀಲನೆ ಮಾಡುವ ರೀತಿ ಹಿಂದೆ ತೆರಳಿದಾಗ ಇತ್ತ ಮತ್ತೊಬ್ಬ ಬೀರುವನ್ನು ತೆಗೆದು ಅದರಲ್ಲಿದ್ದ 40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಗಂಟು ಮೂಟೆ ಕಟ್ಟಿದ್ದಾನೆ.

ತದನಂತರ ನಾವಿನ್ನು ಬರುತ್ತೇವೆ, ಕೂಡಲೇ ಯುಜಿಡಿ ಸಂಪರ್ಕ ಕಲ್ಪಿಸುವುದಾಗಿ ಹೇಳಿ ತೆರಳಿದ್ದಾರೆ. ಕೆಲ ಸಮಯದ ಬಳಿಕ ರೂಮಿನಲ್ಲಿರುವ ಬೀರುವಿನ ಬಾಗಿಲು ತೆರೆದಿರುವುದನ್ನು ಗಮನಿಸಿದ ಮನೋಹರ್ ಸಮೀಪ ಹೋಗಿ ನೋಡಿದಾಗ ಅದರಲ್ಲಿದ್ದ ಚಿನ್ನಾಭರಣ ಕಳುವಾಗಿರುವುದು ತಿಳಿದುಬಂದಿದೆ.

ಕ್ಯಾತ್ಸಂದ್ರ ಠಾಣೆ:
ಮತ್ತೊಂದು ಪ್ರಕರಣದಲ್ಲಿ ಶಿವರಾಮಕಾರಂತ ನಗರದಲ್ಲಿ ನೆಲೆಸಿರುವ ವಾಸುದೇವಶೆಟ್ಟಿ-ಅನಸೂಯಮ್ಮ ಎಂಬ ವೃದ್ಧ ದಂಪತಿಯ ಮನೆಗೆ ಇಂದು ಬೆಳಗ್ಗೆ 8.30ರ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಟಾಕುಟೀಕಾಗಿ ಬಟ್ಟೆ ಧರಿಸಿಕೊಂಡು ಬಂದು ಬಾಗಿಲು ತಟ್ಟಿದ್ದಾರೆ. ಪರಿಚಯಸ್ಥರೇ ಬಂದಿರಬಹುದೆಂದು ವಾಸುದೇವಶೆಟ್ಟಿ ಬಾಗಿಲು ತೆರೆಯುತ್ತಿದ್ದಂತೆ ನಾವು ಸ್ಮಾರ್ಟ್ ಸಿಟಿಯವರು ನಿಮ್ಮ ಮನೆಯಲ್ಲಿ ಯುಜಿಡಿ ಕನೆಕ್ಷನ್ ಹೇಗಿದೆ ಎಂದು ಮಾತನಾಡಿಸಿ ಎಲ್ಲಾ ಕೊಠಡಿಗಳನ್ನು ನೋಡಿದ್ದಾರೆ.

ನಂತರ ಒಬ್ಬಾತ ವೃದ್ಧ ದಂಪತಿಯನ್ನು ನಿಮ್ಮ ಮನೆಯ ಮೇಲಿನ ಟ್ಯಾಂಕ್ ನೋಡಬೇಕೆಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಇತ್ತ ಮತ್ತೊಬ್ಬ ರೂಮಿನಲ್ಲಿದ್ದ ಬೀರುವನ್ನು ಕೈಗೆ ಸಿಕ್ಕ 30 ಸಾವಿರ ಹಣ ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಗಂಟು ಕಟ್ಟಿದ್ದಾನೆ. ಈತನ ಕೆಲಸ ಮುಗಿಯುತ್ತಿದ್ದಂತೆ ದಂಪತಿ ಜೊತೆ ಮನೆ ಮೇಲೆ ಹೋಗಿದ್ದ ವ್ಯಕ್ತಿ ಕೆಳಗಿಳಿದು ಬಂದು ನಾವಿನ್ನು ಬರುತ್ತೇವೆ. ಸದ್ಯದಲ್ಲೇ ಯುಜಿಡಿ ಸಂಪರ್ಕ ಕಲ್ಪಿಸಿಕೊಡುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ವೃದ್ಧ ದಂಪತಿಗೆ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿ ನೆರೆಹೊರೆಯವರಿಗೆ ತಿಳಿಸಿದ್ದಾರೆ. ಈ ವೇಳೆ ಬೆಳಗ್ಗೆ ಇಬ್ಬರು ಬಂದಿದ್ದ ವಿಷಯವನ್ನು ತಿಳಿಸಿದಾಗ ಅನುಮಾನಗೊಂಡು ತಕ್ಷಣ ಕ್ಯಾತ್ಸಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ.

ಸಬ್‍ಇನ್ಸ್‍ಪೆಕ್ಟರ್ ರಾಜು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಡಿವೈಎಸ್ಪಿ ನಾಗರಾಜು, ವೃತ್ತ ನಿರೀಕ್ಷಕ ರಾಘವೇಂದ್ರ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರಿಗೆ ಘಟನೆ ವರದಿ ನೀಡಿದ್ದಾರೆ. ತಕ್ಷಣ ದಿವ್ಯಾಗೋಪಿನಾಥ್ ಅವರು ಕಳ್ಳರ ಪತ್ತೆಗೆ ತಂಡವೊಂದನ್ನು ರಚಿಸಿ, ಕೂಡಲೇ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮ್ ದೂ.ಸಂ.0816-2278000 ಅಥವಾ 9480802932 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಸಾರ್ವಜನಿಕರಲ್ಲಿ ಎಸ್‍ಪಿ ಮನವಿ :
ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಯಾರೇ ಅಪರಿಚಿತರಾಗಲಿ ತಮ್ಮ ಮನೆಗೆ ಬಂದು ತಾವು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಎಂದು ಹೇಳಿದರೆ ಅಂಥವರ ಬಗ್ಗೆ ಎಚ್ಚರಿಕೆಯಿಂದಿರಿ. ಇಂದು ಬೆಳಗ್ಗೆ ಎರಡು ಕಡೆ ನಡೆದಿರುವ ಕಳ್ಳತನಗಳು ಯುಜಿಡಿ ಹೆಸರೇಳಿಕೊಂಡು ಮಾಡಿದ್ದಾರೆ. ಇಂತಹ ನೆಪ ಮಾಡಿಕೊಂಡು ನಿಮ್ಮ ಮನೆ ಬಳಿ ಬರುವವರ ಬಗ್ಗೆ ಬಹಳ ಎಚ್ಚರಿಕೆಯಿಂದಿರಿ, ಅಪರಿಚಿತ ವ್ಯಕ್ತಿಗಳ ಬಗ್ಗೆ ಅನುಮಾನ ಬಂದರೆ ಪೊಲೀಸ್ ಠಾಣೆಗೆ ಮೊದಲು ತಿಳಿಸಿ, ನೆರೆಹೊರೆಯವರ ಸಹಾಯ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ. ತುಮಕೂರು ನಗರ ವೃತ್ತನಿರೀಕ್ಷಕ ಚಂದ್ರಶೇಖರ್, ತಿಲಕ್ ಪಾರ್ಕ್ ವೃತ್ತ ನಿರೀಕ್ಷಕ ರಾಧಾಕೃಷ್ಣ, ಕ್ಯಾತ್ಸಂದ್ರವೃತ್ತ ನಿರೀಕ್ಷಕ ರಾಘವೇಂದ್ರ, ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರನ್ನೊಳಗೊಂಡ ತಂಡವನ್ನು ಎಸ್‍ಪಿ ಅವರು ನಗರದಲ್ಲಿ ಹೈಅಲರ್ಟ್ ಮಾಡಿದ್ದಾರೆ.

Facebook Comments

Sri Raghav

Admin