ಸಿಕ್ಕ ಅನುದಾನ ಬಳಸಿಕೊಳ್ಳದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ರಾಜ್ಯ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

Govt-Fund

– ಉಮೇಶ್ ಕೋಲಿಗೆರೆ
ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜಕೀಯವಾಗಿ ಪದೇ ಪದೇ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನವನ್ನೇ ಬಳಸಿಕೊಳ್ಳಲು ರಾಜ್ಯಸರ್ಕಾರದ ಬಳಿ ಯೋಜನೆಗಳಿಲ್ಲದೆ ಸುಮಾರು 586 ಕೋಟಿ ರೂ. ಅನುದಾನವನ್ನು ಕಡಿತ ಮಾಡಲು ಮುಂದಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಪ್ರಾಯೋಗಿಕ ನಾಲ್ಕು ಯೋಜನೆಗಳಿಗೆ 2018-19ನೇ ಸಾಲಿನಲ್ಲಿ ಒಟ್ಟು 2176.77 ಕೋಟಿ ರೂ. ಅನುದಾನ ನಿಗದಿಯಾಗಿದೆ. ಅದರಲ್ಲಿ 1590.51 ಕೋಟಿ ರೂ. ಅನುದಾನ ಮಾತ್ರ ಅಗತ್ಯವಿದ್ದು, ಹೆಚ್ಚುವರಿಯಾಗಿರುವ 586.26 ಕೋಟಿ ರೂ.ಗಳನ್ನು ಕಡಿತ ಮಾಡಿ ರಾಜ್ಯದ ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 250 ಕೋಟಿ ರೂ.ಗಳನ್ನು ರಾಜ್ಯಕ್ಕೆ ನಿಗದಿ ಮಾಡಿದ್ದರೆ, ಅದರಲ್ಲಿ 15 ಕೋಟಿರೂ.ಗಳು ಮಾತ್ರ ಸಾಕು, ಉಳಿದ 235 ಕೋಟಿ ರೂ.ಗಳನ್ನು ಕಡಿತ ಮಾಡಬೇಕು ಎಂದು ವರದಿ ನೀಡಲಾಗಿದೆ. ನಬಾರ್ಡ್‍ನ ಸಾಮಾನ್ಯ ಯೋಜನೆಯಡಿ 49.46 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ್ದರೆ, ಅದರಲ್ಲಿ 26.68 ಕೋಟಿ ರೂ. ಸಾಕು, ಉಳಿದ 22.78 ಕೋಟಿ ರೂ.ಗಳನ್ನು ಕಡಿತ ಮಾಡಬೇಕು. ನಬಾರ್ಡ್‍ನ ಎಸ್‍ಡಿಪಿ ಯೋಜನೆಯಡಿ 66.98 ಕೋಟಿ ರೂ. ನಿಗದಿಯಾಗಿದ್ದರೆ, ಅದರಲ್ಲಿ 38.50 ಕೋಟಿ ಸಾಕು, 28.48 ಕೋಟಿ ರೂ.ಗಳನ್ನು ಕಡಿತ ಮಾಡಿ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ ಅನುದಾನವನ್ನು ರಾಜ್ಯಸರ್ಕಾರ ಸಂಪೂರ್ಣವಾಗಿ ಬಳಸಿಕೊಳ್ಳಲು ಹಿಂದೇಟು ಹಾಕಿದೆ.
ಒಟ್ಟು 1810.33 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದರೆ ಅದರಲ್ಲಿ 1510.33ಕೋಟಿ ರೂ.ಗಳ ಅನುದಾನ ಸಾಕು ಉಳಿದ 300 ಕೋಟಿ ಅನುದಾನವನ್ನು ಕಡಿತ ಮಾಡಬೇಕೆಂದು ವರದಿ ನೀಡಲಾಗಿದೆ. ಪ್ರಧಾನಿ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‍ವೈ), ನಬಾರ್ಡ್, ಸ್ವಚ್ಛ ಭಾರತ ಮಿಷನ್ (ಎಸ್‍ಬಿಎಂ) ಕೇಂದ್ರ ಪುರಸ್ಕøತ ಯೋಜನೆಗಳಾಗಿದ್ದು, ಅನುದಾನಿತ ಕಾಮಗಾರಿಗಳಿಲ್ಲದೆ ಇರುವುದರಿಂದ ಅನುದಾನದ ಅಗತ್ಯವಿಲ್ಲ. ಹೀಗಾಗಿ ಹೆಚ್ಚುವರಿಯಾಗಿರುವ 586.26 ಕೋಟಿ ರೂ.ಗಳನ್ನು ಬೇರೆ ಬೇರೆ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.  ಹೆಚ್ಚುವರಿ ಅನುದಾನದಲ್ಲಿ 278 ಕೋಟಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅನುದಾನವಾಗಿದ್ದು, ಬಾಕಿ 308.26 ಕೋಟಿ ಸಾಮಾನ್ಯ ಅನುದಾನವಾಗಿದೆ. ಈ ಅನುದಾನದ ಪೈಕಿ 13.09 ಕೋಟಿ ರೂ.ಗಳನ್ನು ನಬಾರ್ಡ್ ಕೆರೆ ಅಭಿವೃದ್ಧಿಗೆ ಮತ್ತು ಉಳಿದ 573.17 ಕೋಟಿ ರೂ.ಗಳನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮರು ಹಂಚಿಕೆ ಮಾಡಲು ಅಧಿಕಾರಿಗಳು ರಾಜ್ಯಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ರಾಜಕೀಯ ಆರೋಪ:
ಹದಿನಾಲ್ಕನೇ ಹಣಕಾಸು ಯೋಜನೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ವೇಳೆ ತಾರತಮ್ಯ ಮಾಡುತ್ತಿದೆ ಎಂದು ಆರಂಭದಿಂದಲೂ ಆರೋಪಗಳು ಕೇಳಿ ಬರುತ್ತಲೇ ಇವೆ. ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲಂತೂ ಈ ಆರೋಪ ಇನ್ನಷ್ಟು ಗಂಭೀರತೆಯನ್ನು ಪಡೆದುಕೊಂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಇದಕ್ಕೆ ತಿರುಗೇಟು ನೀಡಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 2.19 ಲಕ್ಷ ಕೋಟಿ ಅನುದಾನವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಇದು ಯಾವ ಮಾರ್ಗದಲ್ಲಿ ಖರ್ಚಾಗಿದೆ ಎಂಬ ಲೆಕ್ಕ ನೀಡಬೇಕು ಎಂದು ಒತ್ತಾಯಿಸಿದರು. ಈ ಆರೋಪ ಕೆಲಕಾಲ ಚರ್ಚೆಗೆ ಗ್ರಾಸವಾಗಿತ್ತು.

ಲೆಕ್ಕ ಕೇಳಲು ಅಮಿತ್ ಷಾ ಯಾರು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದರು. ನಿನ್ನೆಯಷ್ಟೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ನೂತನ ಸಚಿವ ಕೃಷ್ಣಭೈರೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಲೆಕ್ಕ ಕೊಟ್ಟಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ವಾಸ್ತವದಲ್ಲಿ ರಾಜ್ಯಸರ್ಕಾರ ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲು ಹಿಂದೇಟು ಹಾಕಿರುವುದು ಅಂಕಿಅಂಶಗಳ ಸಹಿತ ಬಹಿರಂಗವಾಗಿದೆ. ಕೇಂದ್ರ ಸರ್ಕಾರ ಫೆ.1 ರಂದು ಬಜೆಟ್ ಮಂಡಿಸಿ ರಾಜ್ಯಕ್ಕೆ 2176 ಕೋಟಿ ರೂ. ಅನುದಾನವನ್ನು ನೀಡಿದ್ದರೆ ಅದನ್ನು ಬಳಸಿಕೊಳ್ಳಲು ರಾಜ್ಯಸರ್ಕಾರ ನಿರಾಕರಿಸುತ್ತಿದೆ.
ಕೇಂದ್ರ ಪುರಸ್ಕøತ ಯೋಜನೆಗೆ ಅನುಮೋದಿತ ಕಾಮಗಾರಿಗಳು ಇಲ್ಲದೆ ಇರುವುದರಿಂದ ಅನುದಾನವನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಸ್ವಚ್ಛ ಭಾರತ್ ಬದಲಾಗಿ ಕೆರೆ ತುಂಬಿಸುವ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಮುಂದಾಗಿದೆ. ಕೆರೆ ಅಭಿವೃದ್ದಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಸಾಕಷ್ಟು ಅಕ್ರಮ ನಡೆಯುತ್ತಿದ್ದು, ಲೆಕ್ಕಕ್ಕೆ ಸಿಗದ ಹಾಗೆ ಅನುದಾನ ಖರ್ಚಾಗುತ್ತಿರುವ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ.  ಅಧಿಕಾರಿಗಳು ಯಾವ ಉದ್ದೇಶಕ್ಕಾಗಿ ನಿರ್ದಿಷ್ಟ ಯೋಜನೆಗಳ ಬದಲಾಗಿ ಅನುದಾನದ ಮರುಹಂಚಿಕೆಗೆ ಮನವಿ ಸಲ್ಲಿಸಿದ್ದಾರೆ ಎಂಬುದು ನಿಗೂಢವಾಗಿದೆ.  ಅನುದಾನ ಬಳಕೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದ್ದರೂ ಸರ್ಕಾರದ ನಿರಾಸಕ್ತಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Facebook Comments

Sri Raghav

Admin