ತನ್ನ ಮೂರು ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Women-Suicide--01

ಕೋಲಾರ, ಜೂ.15- ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಲೂರು ತಾಲೂಕಿನ ತೋಟಗೋಡನಹಳ್ಳಿ ಗ್ರಾಮದಲ್ಲಿ ನಡೆದಿದೆ.ನಕ್ಕನಹಳ್ಳಿ ಗ್ರಾಮದ ನಿವಾಸಿಗಳಾದ ಪಾರ್ವತಮ್ಮ (25), ಜೀವನ್ (8), ಚಂದನ್ (7), ಅಕ್ಷಯ್ (4) ಆತ್ಮಹತ್ಯೆ ಮಾಡಿಕೊಂಡವರು.

ನಕ್ಕನಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರೊಂದಿಗೆ ಕಳೆದ 9 ವರ್ಷಗಳ ಹಿಂದೆ ಪಾರ್ವತಮ್ಮನ ವಿವಾಹವಾಗಿದ್ದು, ಪ್ರಾರಂಭದಲ್ಲಿ ಇವರ ಸಾಂಸಾರಿಕ ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಮಕ್ಕಳ ವಿದ್ಯಾಭ್ಯಾಸದ ವಿಚಾರವಾಗಿ ಆಗಾಗ್ಗೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.  ನಿನ್ನೆಯೂ ಸಹ ಮಕ್ಕಳನ್ನು ಶಾಲೆಗೆ ಸೇರಿಸುವ ವಿಚಾರವಾಗಿ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಪಾರ್ವತಮ್ಮ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಕರೆದುಕೊಂಡು ಹೋಗಿದ್ದಾಳೆ.

ಗ್ರಾಮ, ತವರು ಮನೆ ಹಾಗೂ ನೆಂಟರ ಮನೆಯಲ್ಲಿ ವಿಚಾರಿಸಿದಾಗ ಇವರ ಸುಳಿವು ಪತ್ತೆಯಾಗಿರಲಿಲ್ಲ. ಗ್ರಾಮದ ಹೊರವಲಯದ ಕೆರೆಯಲ್ಲಿ ಶವಗಳು ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕುಟುಂಬ ಸದಸ್ಯರಿಗೆ ಸುದ್ದಿ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಸಹಾಯದಿಂದ ಕಾರ್ಯಾಚರಣೆ ನಡೆಸಿ ನಿನ್ನೆ ಪಾರ್ವತಮ್ಮ ಹಾಗೂ ಅಕ್ಷಯ್‍ಕುಮಾರ್ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಇಂದು ಜೀವನ್ ಮತ್ತು ಚಂದನ್ ಶವಗಳು ಸಿಕ್ಕಿವೆ. ಈ ಸಂಬಂಧ ಮಾಸ್ತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin