ತಮಿಳುನಾಡಿಗೆ ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-n-01
ಮಧುರೆ,ಜೂ.16-ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಸೌಹರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ಕೊಳ್ಳದಿಂದ ನೆರೆಯ ತಮಿಳುನಾಡಿಗೆ ನೀರು ಹರಿಸಬಾರದೆಂದು ರೈತರು ಒತ್ತಾಯಿಸುತ್ತಿರುವ ಸಂದರ್ಭದಲ್ಲೇ 20 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಮುಖ್ಯಮಂತ್ರಿ ಅವರೇ ಸಮ್ಮತಿಸಿರುವುದು ಅನ್ನದಾತನ ಕಣ್ಣು ಕೆಂಪಾಗುವಂತೆ ಮಾಡಿದೆ. ನಿನ್ನೆ ತಮಿಳುನಾಡಿನ ಸುಪ್ರಸಿದ್ದ ಧಾರ್ಮಿಕ ಕೇಂದ್ರವಾದ ಮಧುರೆ ಮೀನಾಕ್ಷಿ ದೇವಸ್ಥಾನಕ್ಕೆ ತೆರಳಿ ಕುಟುಂಬ ಸಮೇತ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬಿನಿ ಜಲಾಶಯದಿಂದ ಕೂಡಲೇ 20 ಸಾವಿರ ಕ್ಯುಸೆಕ್ಸ್ ನೀರು ಬಿಡಲು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.

ದೇವರ ದಯೆಯಿಂದ ಈ ಬಾರಿ ರಾಜ್ಯದಲ್ಲಿ ಉತ್ತಮ ಮುಂಗಾರು ಆರಂಭವಾಗಿದೆ. ವಿಶೇಷವಾಗಿ ಕಾವೇರಿ ಕೊಳ್ಳದ ಕಬಿನಿ, ಹಾರಂಗಿ,ಕೆಆರ್‍ಎಸ್ ಹಾಗೂ ಹೇಮಾವತಿ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗಿರುವುದು ಕರ್ನಾಟಕ ಮತ್ತು ತಮಿಳುನಾಡು ರೈತರಲ್ಲಿ ಮಂದಹಾಸ ಮೂಡಿಸಿದೆ. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ. ಉಭಯ ರಾಜ್ಯಗಳು ನೀರಿನ ಸಮಸ್ಯೆಯನ್ನು ಮಾತುಕತೆ ಮತ್ತು ವಾಸ್ತವ ಸ್ಥಿತಿಗತಿಯ ಮೇಲೆ ಪರಿಹರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಒಂದು ವೇಳೆ ಇದೇ ರೀತಿ ಉತ್ತಮ ಮಳೆಯಾದರೆ, ನಾವು ತಮಿಳುನಾಡಿಗೆ ನೀಡಬೇಕಾದ 10 ಟಿ.ಎಂ.ಸಿ ನೀರು ಬಿಡಲು ಸಿದ್ದರಿದ್ದೇವೆ.ನಮ್ಮ ನಿರೀಕ್ಷೆಯಂತೆ ಮಳೆಯಾದರೆ ನಮ್ಮ ಜಲಾಶಯದಿಂದ ನೀರು ಹರಿಸಲು ಯಾವುದೇ ರೀತಿಯ ತೊಂದರೆಯಿಲ್ಲ. ಮಳೆಯಾಗದಿದ್ದರೆ ಮಾತ್ರ ಎರಡು ರಾಜ್ಯಗಳಲ್ಲಿ ಪರಿಸ್ಥಿತಿ ಬಿಗಾಡಯಿಸುತ್ತದೆ. ಇಂತಹ ಸಂದರ್ಭದಲ್ಲಿ ಜನರು ತಾಳ್ಮೆ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಬೇಕೆಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ತಮಿಳುನಾಡಿನ ಖ್ಯಾತ ನಟ ಕಮಲ್‍ಹಾಸನ್ ಅವರು, ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿ ಸಂಕಷ್ಟ ಸ್ಥಿತಿಯಲ್ಲಿರುವ ತಮಿಳುನಾಡಿಗೆ ಕರ್ನಾಟಕದ ಜಲಾಶಯದಿಂದ ನೀರು ಬಿಡುವಂತೆ ಮನವಿ ಮಾಡಿದ್ದರು.

Facebook Comments

Sri Raghav

Admin