ಭಾರತದೊಳಗೆ ನುಸುಳಲು 35 ಲಷ್ಕರ್ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಸಜ್ಜು, ಹೈ ಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

LET--01

ಶ್ರೀನಗರ, ಜೂ.17- ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪಾಕಿಸ್ತಾನ ಬೆಂಬಲಿತ 35ಕ್ಕೂ ಹೆಚ್ಚು ಲಷ್ಕರ್-ಎ-ತೈಬಾ (ಎಲ್‍ಇಟಿ) ಭಯೋತ್ಪಾದಕರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಗಡಿಯೊಳಗೆ ನುಸುಳುವುದಕ್ಕೆ ಸಜ್ಜಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ. ಇದರಿಂದಾಗಿ ಕಾಶ್ಮೀರ ಕಣಿವೆ ಸೇರಿದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ನಾಲ್ಕು ಕಡೆಗಳಿಂದ ಗಡಿ ದಾಟಿ ಒಳ ನುಸುಳಲು 35ಕ್ಕೂ ಹೆಚ್ಚು ಎಲ್‍ಇಟಿ ಉಗ್ರರು ಸಿದ್ದರಾಗಿದ್ದಾರೆ ಎಂದು ಗುಪ್ತಚರ ದಳ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಾಚ್ಚಿಲ್ ಸೆಕ್ಟರ್‍ನಲ್ಲಿರುವ ಶಾರ್ಡಿ ಎಂಬಲ್ಲಿನ ಗಡಿ ಪ್ರದೇಶದಲ್ಲಿ ಈಗಾಗಲೇ 18 ಭಯೋತ್ಪಾದಕರು ಜಮಾಯಿಸಿದ್ದಾರೆ. ಇನ್ನು ನೌಗಾಂವ್ ಬಳಿ ಲೀಪಾದಲ್ಲಿ ಒಳ ನುಸುಳಲು ಇನ್ನೂ 8 ಉಗ್ರಗಾಮಿಗಳು ಹೊಂಚು ಹಾಕಿ ಕುಳಿತಿದ್ದಾರೆ. ಇವರೆಲ್ಲ ಬಳಿ ಅತ್ಯಾಧುನಿಕ ಶಸ್ತಾಸ್ತ್ರಗಳು, ಮದ್ದು ಗುಂಡುಗಳು ಹಾಗೂ ಸ್ಫೋಟಕ ಸಾಧನಗಳಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಮತ್ತೊಂದೆಡೆ ಪೂಂಚ್‍ನ ಕಾಲು ದೀ ಧೇರಿ ಎಂಬಲ್ಲಿ ಆರು ಉಗ್ರರು ಹಾಗೂ ಕೋಲ್ ಲೀ ಪ್ರದೇಶದಲ್ಲಿ ಇನ್ನೂ ಮೂವರು ಆತಂಕವಾದಿಗಳು ಗಡಿ ನುಸುಳಲು ಸಿದ್ಧರಾಗಿದ್ದಾರೆ. ಯಾವುದೇ ಕ್ಷಣದಲ್ಲಿ ಅವರು ಒಳ ನುಗ್ಗಬಹುದಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ದಳ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ದೇಶದ ವಿವಿಧ ಸ್ಥಳಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin