ಕಾದು ಕುಳಿತ ವಧು, ಕಲ್ಯಾಣ ಮಂಟಪಕ್ಕೆ ಬಾರದ ವರ, ನಿಂತುಹೋಯ್ತು ಮದುವೆ..!

ಈ ಸುದ್ದಿಯನ್ನು ಶೇರ್ ಮಾಡಿ

Marriag-vb-01

ಕುಣಿಗಲ್, ಜೂ.17- ಕಲ್ಯಾಣ ಮಂಟಪಕ್ಕೆ ವರ ಬಾರದೇ ಮದುವೆ ನಿಂತು ಹೋಗಿ ವಧುವಿನ ಮನೆಯವರು ಕಂಗಾಲಾಗಿರುವ ಘಟನೆ ಇಂದು ನಡೆದಿದೆ. ತಾಲೂಕಿನ ಯಡಿಯೂರು ಹೋಬಳಿ ಕಲ್ಲೇಗೌಡನ ಪಾಳ್ಯದ ಶಿವಕುಮಾರ್ ಎಂಬಾತನಿಗೆ ಕಸಬಾ ಹೋಬಳಿ ಬಿಳಿ ದೇವಾಲಯ ಗ್ರಾಮದ ತಮ್ಮ ಸಂಬಂಧಿಕರ ಹುಡುಗಿಯ ಜೊತೆ ಮದುವೆ ನಿಶ್ಚಯವಾಗಿತ್ತು.

ಇಂದು ಯಡಿಯೂರಿನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮುಹೂರ್ತ ನಿಗದಿಯಾಗಿತ್ತು. ಆದರೆ ನಿನ್ನೆ ರಾತ್ರಿ ವರನ ಕಡೆಯವರು ಕಲ್ಯಾಣಮಂಟಪಕ್ಕೆ ಬಾರದಿರುವ ಕಾರಣ ಮದುವೆಯೇ ನಿಂತು ಹೋಯಿತು.  ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ವರ ಶಿವಕುಮಾರ್ ಮದುವೆ ದಿನವೂ ಮನೆಗೆ ಬಾರದ ಕಾರಣ ಮನೆಯವರು ಕರೆ ಮಾಡಿದ್ದಾರೆ. ಆದರೆ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಇದರಿಂದ ಭಯಗೊಂಡ ಪೋಷಕರು, ಸಂಬಂಧಿಕರು ನಿನ್ನೆ ಕಲ್ಯಾಣ ಮಂಟಪಕ್ಕೆ ಹೋಗದೆ ಮನೆಯಲ್ಲೇ ಇದ್ದರು. ಆದರೆ ವಧುವಿನ ಕಡೆಯವರು ಮಾತ್ರ ಸಂಪ್ರದಾಯದಂತೆ ಹುಡುಗಿಯೊಂದಿಗೆ ಕಲ್ಯಾಣ ಮಂಟಪಕ್ಕೆ ತೆರಳಿ ಶಾಸ್ತ್ರೋಕ್ತವಾಗಿ ಶಾಸ್ತ್ರಗಳನ್ನು ನೆರವೇರಿಸಿದ್ದಾರೆ. ಹುಡುಗನ ಕಡೆಯವರು ಬಾರದೆ ವಧುವಿನ ಕಡೆಯವರು ಗಲಿಬಿಲಿಗೊಂಡರು.

ಬೆಳಿಗ್ಗೆಯಾದರೂ ವರನ ಕಡೆಯವರು ಬಾರದ ಹಿನ್ನೆಲೆಯಲ್ಲಿ ಅವರ ಮನೆಯವರನ್ನು ವಿಚಾರಿಸಿದಾಗ ವರನೇ ಮನೆಗೆ ಬಂದಿಲ್ಲ, ಕಲ್ಯಾಣ ಮಂಟಪಕ್ಕೆ ನಾವು ಬಂದು ಏನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದರಿಂದ ಕಂಗಾಲಾದ ವಧುವಿನ ಪೋಷಕರು ಅಮೃತೂರು ಠಾಣೆಗೆ ದೂರು ನೀಡಿದ್ದಾರೆ. ಇಂದು ನಡೆಯಬೇಕಿದ್ದ ಮದುವೆ ನಿಂತು ಹೋಗಿದೆ.

Facebook Comments

Sri Raghav

Admin