ರಾಜ್ಯಗಳಿಗೆ ಕೇಂದ್ರದಿಂದ 11 ಲಕ್ಷ ಕೋಟಿ ರೂ. ನೆರವು : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Neeti-Ayog

ನವದೆಹಲಿ, ಜೂ.17-ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ 11 ಲಕ್ಷ ಕೋಟಿ ರೂ.ಗಳ ನೆರವು ನೀಡುತ್ತಿದೆ. ಇದು ಕಳೆದ ವರ್ಷಕ್ಕಿಂತ 5 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ನಾಲ್ಕನೆ ಮಹತ್ವದ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ಕಳೆದ ವಿತ್ತ ವರ್ಷದಲ್ಲಿ ರಾಜ್ಯಗಳಿಗೆ 6 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಅದನ್ನು 11 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಬೆಳವಣಿಗೆ ದರವನ್ನು ಎರಡಂಕಿಗೆ ಕೊಂಡೊಯ್ಯುವ ದೊಡ್ಡ ಸವಾಲು ಕೇಂದ್ರ ಸರ್ಕಾರದ ಮುಂದಿದೆ. ಇದನ್ನು ಈ ಗುರಿ ಸಾಧನೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.  ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನೆರೆ ಪೀಡಿತ ಪ್ರದೇಶಗಳಿಗೆ ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.  ಕೃಷಿಕರ ಆದಾಯವನ್ನು ಇಮ್ಮಡಿಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಗುರಿ ಸಾಧನೆಗಾಗಿ ಎಲ್ಲ ರಾಜ್ಯಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ನಾಲ್ಕನೆ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಸ್ತಾಪಿಸಿ ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆಯೂ ರಾಜ್ಯಗಳ ಸಹಕಾರ ಕೋರಿದರು. ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಪರಸ್ಪರ ಸಹಕಾರ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಒಕ್ಕೂ ವ್ಯವಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಲು ಸಾಧ್ಯ ಎಂದು ಅವರು ವಿಶ್ಲೇಷಿಸಿದರು.

ಸರಳ ಮತ್ತು ಏಕರೂಪದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ವ್ಯವಸ್ಥೆ ದೇಶಾದ್ಯಂತ ಯಶಸ್ವಿಯಾಗಿ ಅನುಷ್ಠಾನಕ್ಕೆ ಬಂದಿರುವ ಬಗ್ಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿ, ಇದಕ್ಕೆ ರಾಜ್ಯ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದರು. ಆಯುಷ್ಮಾನ್ ಭಾರತ್, ರಾಷ್ಟ್ರೀಯ ಪೋಷಕಾಂಶ ಯೋಜನೆ, ಇಂಧ್ರಧನುಷ್ ಯೋಜನೆ, ಆಶೋತ್ತರ ಜಿಲ್ಲೆಗಳ ಅಭಿವೃದ್ದಿ ಸೇರಿದಂತೆ ವಿವಿಧ ಮಹತ್ವದ ಯೋಜನೆಗಳನ್ನು ಅವರು ಸಭೆಯಲ್ಲಿ ಸಂಕ್ಷಿಪ್ತವಾಗಿ ತಿಳಿಸಿ ಈ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ರಾಜ್ಯಗಳ ಸಹಕಾರ ಬಹು ಮುಖ್ಯ ಎಂದರು.

ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರೂ ಸಹ ಸಭೆಯಲ್ಲಿ ಪಾಲ್ಗೊಂಡರು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್‍ಗಳು, ಕೇಂದ್ರ ಸಚಿವರುಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಸಭೈಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ(ಪಶ್ಚಿಮ ಬಂಗಾಳ), ಎನ್.ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ), ಪಿಣರಾಯಿ ವಿಜಯನ್(ಕೇರಳ), ವಸುಂಧರಾ ರಾಜೆ (ರಾಜಸ್ತಾನ), ಯೋಗಿ ಆದಿತ್ಯನಾಥ (ಉತ್ತರ ಪ್ರದೇಶ) ಮೊದಲಾದವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದರು.  ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ನಿತಿನ್ ಗಡ್ಕರಿ ಸಹ ಸಭೆಯಲ್ಲಿ ಹಾಜರಿದ್ದರು.

Facebook Comments

Sri Raghav

Admin