ಪ್ರತ್ಯೇಕ ಬಜೆಟ್ : ಸಿಎಂ ಪರ ನಿಂತ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯಗೆ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar
ಬೆಂಗಳೂರು, ಜೂ.17- ಹೊಸ ಸರ್ಕಾರ ಬಂದಾಗ ಹೊಸದಾಗಿ ಬಜೆಟ್ ಮಂಡಿಸುವುದು ವಾಡಿಕೆ. ಪ್ರತಿಯೊಂದು ಸರ್ಕಾರಕ್ಕೆ ಹೊಸ ಕಾರ್ಯಕ್ರಮಗಳಿರುತ್ತವೆ. ಅವುಗಳನ್ನು ಬಜೆಟ್ ಮೂಲಕ ಪ್ರಕಟಿಸುವುದು ಸ್ವಾಭಾವಿಕವಾದ ಸಂಪ್ರದಾಯ ಎಂದು ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಸಮಿತಿ 10 ದಿನಗಳ ಒಳಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿಕೊಡಲಿದೆ. ಅನಂತರ ಅದನ್ನು ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಈ ಹಿಂದಿನ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ನಿರ್ಧರಿಸಲಾಗಿದೆ ಎಂದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸದ ಹೊರತು ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಮೊದಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಬೇಕು. ಅದಕ್ಕೆ ಹಣಕಾಸು ಸೌಲಭ್ಯ ಒದಗಿಸಬೇಕು. ಮೈತ್ರಿ ಸರ್ಕಾರಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳೇ ಮೂಲ ಆಧಾರ. ಅದರ ಹೊರತಾಗಿ ಬೇರೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳು ಮೈತ್ರಿ ಸರ್ಕಾರದಲ್ಲಿ ಮುಂದುವರೆಯಲಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಬಜೆಟ್ ಅಗತ್ಯವಿಲ್ಲ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಮೈತ್ರಿ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು ಅಥವಾ ಪೂರಕ ಬಜೆಟ್‍ನಲ್ಲೇ ಹೊಸ ಸರ್ಕಾರದ ಕಾರ್ಯಕ್ರಮಗಳನ್ನು ಸೇರಿಸಬೇಕು ಎಂಬೆಲ್ಲಾ ಅಂಶಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪುಗೊಂಡ ನಂತರವೇ ಚರ್ಚೆಯಾಗುತ್ತವೆ. ಅದಕ್ಕೆ ಮೊದಲು ನಿರ್ಧಾರಗಳು ಆಗುವುದಿಲ್ಲ. ಕುಮಾರಸ್ವಾಮಿ ಅವರು ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ನಿರ್ಧಾರ ಮಾಡಿರಬಹುದು. ಆದರೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪುಗೊಳ್ಳಬೇಕು ಎಂದರು.
ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಮತ್ತೊಂದು ಸಮನ್ವಯ ಸಮಿತಿ ಸಭೆ ನಡೆದ ನಂತರವೇ ಎಲ್ಲಾ ವಿಷಯಗಳು ಅಂತಿಮಗೊಳ್ಳುತ್ತವೆ ಎಂದು ಪರಮೇಶ್ವರ್ ಹೇಳಿದರು.

ಎಲ್ಲರೂ ಬಾಯಿಗೆ ಬಂದಂತೆ ಮಾತನಾಡಬಾರದು:
ಸಮ್ಮಿಶ್ರ ಸರ್ಕಾರದ ವಿಷಯವಾಗಿ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅಥವಾ ನಾನು, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಾತ್ರ ಮೈತ್ರಿ ಸರ್ಕಾರದ ವಿಷಯವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರೆಲ್ಲಾ ಮಾತನಾಡುವುದರಿಂದ ಗೊಂದಲಗಳು ಸೃಷ್ಟಿಯಾಗುತ್ತದೆ. ಆ ರೀತಿ ಆಗಬಾರದು ಎಂದು ಜೆಡಿಎಸ್‍ನ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನ ವೀರಪ್ಪಮೊಯ್ಲಿ ಅವರ ಹೇಳಿಕೆಗೆ ಪರಂ ಪ್ರತಿಕ್ರಿಯೆ ನೀಡಿದರು.

ಸರ್ಕಾರ ಒಂದು ವರ್ಷಕ್ಕೆ ಬಿದ್ದುಹೋಗಲಿದೆ ಎಂದು ಬಹಳಷ್ಟು ಮಂದಿ ಹೇಳಿಕÉಗಳನ್ನು ನೀಡುತ್ತಿದ್ದಾರೆ. ಇದು ಸರಿಯಲ್ಲ. ಮೈತ್ರಿ ಸರ್ಕಾರ ಐದು ವರ್ಷ ಮುಂದುವರೆಯಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಾವು ನಿರ್ಧಾರ ಮಾಡಿ ಸರ್ಕಾರ ರಚಿಸಿದ್ದೇವೆ. ಈ ಮಧ್ಯೆ ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಒಂದು ವರ್ಷ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೋ ಗೊತ್ತಿಲ್ಲ. ಅದೇ ಬೆನ್ನಲ್ಲೇ ನಾನಾ ರೀತಿಯ ಹೇಳಿಕೆಗಳು ಹೊರ ಬೀಳುತ್ತಿವೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಗಮ ಮಂಡಳಿಗಳಿಗೆ ಶೀಘ್ರವೇ ನೇಮಕಾತಿ ನಡೆಯಲಿದೆ. ಯಾರಿಗೆ ಎಷ್ಟು ಸ್ಥಾನಗಳು, ಯಾವ ನಿಗಮ ಮಂಡಳಿಗಳು ಎಂಬುದನ್ನು ಚರ್ಚೆ ಮಾಡುತ್ತೇವೆ. ಅದನ್ನು ನಿರ್ಧರಿಸಿದ ನಂತರ ನೇಮಕಾತಿಗಳು ನಡೆಯುತ್ತವೆ ಎಂದು ಹೇಳಿದರು. ಸಾಲ ಮನ್ನಾ ವಿಷಯದಲ್ಲಿ ಬೇರ ಬೇರೆ ರೀತಿಯ ವ್ಯಾಖ್ಯಾನಗಳು ನಡೆಯುತ್ತಿವೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

Facebook Comments

Sri Raghav

Admin