ಮಳೆಗಾಲದ ಸಮಸ್ಯೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

DCM-Parameshwar

ಬೆಂಗಳೂರು,ಜೂ.18- ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದರು ಹಾಗೂ ಶಾಸಕರೊಂದಿಗೆ ನಗರಾಭಿವೃದ್ದಿ ಸಚಿವರು ಆಗಿರುವ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇಂದು ಮಹತ್ವದ ಸಭೆ ನಡೆಸಿ ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸಮಸ್ಯೆ ಬಾರದಂತೆ ಕ್ರಮ ವಹಿಸಿ ಎಂದ ಅವರು, ರಾಜಕಾಲುವೆಗಳು ಕಟ್ಟಿಕೊಳ್ಳಲು ಅವಕಾಶ ನೀಡಬೇಡಿ. ಇದರಿಂದ ಜನಸಾಮಾನ್ಯರು ಸ್ಥಳೀಯ ಜನಪ್ರತಿನಿಧಿಗಳನ್ನು ನಿಂದಿಸುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ  ಮಳೆ ನೀರು ಹರಿಯುವ ಕಾಲುವೆಗಳಲ್ಲಿ ಸುಗಮವಾಗಿ ನೀರು ಹರಿಯುವಂತೆ ನೋಡಿಕೊಳ್ಳಿ.  ಒಂದು ವೇಳೆ ದುರಸ್ತಿ ಅಗತ್ಯವಿದ್ದರೆ ಅದನ್ನು ಕೈಗೊಳ್ಳಿ ಎಂದು ಸಲಹೆ ಮಾಡಿದರು.

ಎಲ್ಲೂ ನೀರು ನಿಲ್ಲದಂತೆ ಅಧಿಕಾರಿಗಳಿಗೆ ಕ್ರಮ ವಹಿಸಲು ಸೂಚನೆ ನೀಡಿ, ಇದರೊಂದಿಗೆ ಕಸದ ವಿಲೇವಾರಿಯೂ ವೈಜ್ಞಾನಿಕ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಕಾರ್ಪೊರೇಟರ್ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡು ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ ಎಂದು ಹೇಳಿದರು.

ನೀರಿನೊಂದಿಗೆ ತ್ಯಾಜ್ಯವೂ ಹರಿದು ಎಲ್ಲೆಲ್ಲೆಂದರಲಿ ಶೇಖರಣೆಗೊಳ್ಳುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ಅಗತ್ಯವಿದೆ. ಈಗಾಗಲೇ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ಕೊಟ್ಟಿದ್ದೇನೆ. ಎಲ್ಲರೂ ಇದಕ್ಕೆ ಸಹಕಾರ ಕೊಡಿ. ರಾಜಕಾರಣವೇ ಬೇರೆ, ಅಭಿವೃದ್ಧಿಯೇ ಬೇರೆ. ಹೀಗಾಗಿ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲು ಪ್ರಾಶಸ್ತ್ಯ ನೀಡಿ ಎಂದು ತಿಳಿಸಿದರು. ಬೆಂಗಳೂರಿನ ಬಗ್ಗೆ ಇಡೀ ವಿಶ್ವವೇ ಪ್ರಶಂಸೆಯಿಂದ ನೋಡುತ್ತಿದೆ. ಜನಸ್ನೇಹಿ ನಗರವನ್ನಾಗಿಯೂ ಅಭಿವೃದ್ಧ್ದಿಪಡಿಸಲು ಮೊದಲ ಆದ್ಯತೆ ನೀಡಿ ಎಂದು ನುಡಿದರು.

ಅಪರಾಧ ನಿಯಂತ್ರಿಸಿ ಜನರಲ್ಲಿ ಸುರಕ್ಷತಾ ಭಾವನೆ ಮೂಡಿಸುವುದು ನಮ್ಮ ಗುರಿ. ಇದಕ್ಕೆ ಜನಪ್ರತಿನಿಧಿಗಳು ಹೆಚ್ಚಿನ ಕ್ರಮ ವಹಿಸಬೇಕಿದೆ ಎಂದರು. ಜನವಸತಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರು ಸರಿಪಡಿಸಿಕೊಳ್ಳಲಿ, ಒಂದು ವೇಳೆ ವಾಣಿಜ್ಯ ಉದ್ದೇಶಕ್ಕೆ ಅದನ್ನು ಬಳಸಬೇಕೆಂದಿದ್ದರೆ ಮರು ಅನುಮತಿ ಪಡೆಯಿರಿ. ಇದ್ಯಾವುದನ್ನೂ ಮಾಡದಿದ್ದರೆ ತೆರವುಗೊಳಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಅಕ್ರಮ ಭೂ ಒತ್ತುವರಿ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Facebook Comments

Sri Raghav

Admin