ಗಣ್ಯರಿಗೆ ಮೋದಿ ಸರ್ಕಾರದ ಸಾಧನೆ ತಿಳಿಸಲು ಬೆಂಗಳೂರಿಗೆ ಬರುತ್ತಿದ್ದಾರೆ ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amit-shah--01
ಬೆಂಗಳೂರು, ಜೂ.18- ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಂಬಂಧ ವಿವಿಧ ಕ್ಷೇತ್ರಗಳ ಗಣ್ಯರನ್ನು ಭೇಟಿ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸದ್ಯದಲ್ಲೇ ರಾಜ್ಯಕ್ಕೆ ಭೇಟಿ ಕೊಡಲಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಮಾಡಿರುವ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಂಪರ್ಕ್ ಫಾರ್ ಸಮರ್ಥನ್ ಎಂಬ ವಿನೂತನ ಅಭಿಯಾನವನ್ನು ಆರಂಭಿಸಿದೆ.

ಈ ಅಭಿಯಾನದ ಮೂಲಕ ಸಾಹಿತ್ಯ, ಕ್ರೀಡೆ, ಚಲನಚಿತ್ರ, ಪತ್ರಿಕೋದ್ಯಮ, ಸಮಾಜಸೇವೆ, ವೈದ್ಯಕೀಯ, ಅರ್ಥಶಾಸ್ತ್ರ, ಧಾರ್ಮಿಕ ಮುಖಂಡರು, ಚಲನಚಿತ್ರ ನಟ-ನಟಿಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಭೇಟಿ ಮಾಡಿ ಪ್ರಧಾನಿಯವರ ಸಾಧನೆಗಳನ್ನು ಮನವರಿಕೆ ಮಾಡಿ ಕೊಡುವುದೇ ಬಿಜೆಪಿ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಮುಖ್ಯ ಉದ್ದೇಶ.

ಈಗಾಗಲೇ ಅಮಿತ್ ಷಾ ಅವರು ದೇಶದ ವಿವಿಧ ಭಾಗಗಳಿಗೆ ಭೇಟಿ ಕೊಟ್ಟು ಪ್ರಧಾನಿಯವರು ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲು ವಿವಿಧ ಕ್ಷೇತ್ರಗಳ ಗಣ್ಯ ರನ್ನು ಭೇಟಿ ಮಾಡುತ್ತಿದ್ದಾರೆ. ಮುಂಬೈಗೆ ತೆರಳಿದ್ದ ಅಮಿತ್ ಷಾ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ನಟಿ ಮಾಧುರಿ ದೀಕ್ಷಿತ್, ನಟ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವಂತೆ ಮನವರಿಕೆ ಮಾಡಿದ್ದರು.

ಇನ್ನು ಕಳೆದ ವಾರ ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ಕೇಂದ್ರ ಸಚಿವ ರಾಜವರ್ಧನಸಿಂಗ್ ರಾಥೋಡ್, ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಅವರನ್ನು ಭೇಟಿ ಮಾಡಿ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿಕೊಂಡಿದ್ದರು.

20 ಗಣ್ಯರ ಭೇಟಿ:
ಇದೀಗ ಕರ್ನಾಟಕಕ್ಕೆ ಆಗಮಿಸಲಿರುವ ಅಮಿತ್ ಷಾ ಅವರು ರಾಜ್ಯದ ಆಯ್ದ 20 ಗಣ್ಯರನ್ನು ಭೇಟಿ ಮಾಡಿ ಸರ್ಕಾರದ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೋರಲಿದ್ದಾರೆ.  ಇನ್ಫೋಸಿಸ್ ಮಾಜಿ ಮುಖ್ಯಸ್ಥ ನಾರಾಯಣಮೂರ್ತಿ, ನಂದನ್ ನೀಲೆಕಣಿ, ಮೋಹನ್‍ದಾಸ್ ಪೈ, ಡಾ.ಸುಧಾಮೂರ್ತಿ, ಖ್ಯಾತ ಕ್ರಿಕೆಟ್ ಆಟಗಾರ ಅನಿಲ್‍ಕುಂಬ್ಳೆ, ಜಯದೇವ ಹೃದ್ರೋಗ ಸಂಸ್ಥೆ ಮುಖ್ಯಸ್ಥ ಡಾ.ಮಂಜುನಾಥ್, ಖ್ಯಾತ ಹೃದಯ ತಜ್ಞ ಡಾ.ಭುಜಂಗಶೆಟ್ಟಿ, ಚಿತ್ರನಟ ಉಪೇಂದ್ರ, ಆದಿಚುಂಚನಗಿರಿ ಪೀಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಾಹಿತಿಗಳು, ಬರಹಗಾರರು ಸೇರಿದಂತೆ ಮತ್ತಿತರರನ್ನು ಭೇಟಿ ಮಾಡುವರು. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿರಲಿಲ್ಲ.

ಚುನಾವಣೆಗೂ ಮುನ್ನ ಅವರು ಇಲ್ಲಿಯೇ ವಾಸ್ತವ್ಯ ಹೂಡಿ ಪಕ್ಷದ ಗೆಲುವಿಗೆ ಸಾಕಷ್ಟು ಬೆವರು ಹರಿಸಿದ್ದರು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿತ್ತು. ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಮಿಸುತ್ತಿರುವುದರಿಂದ ಬಿಜೆಪಿ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಹಾಗೂ ಅಭ್ಯರ್ಥಿಗಳ ಆಯ್ಕೆ, ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವುದು ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ಅಮಿತ್ ಷಾ ರೂಪಿಸಲಿದ್ದಾರೆ.

Facebook Comments

Sri Raghav

Admin