ಪ್ರವಾಸಿಗರನ್ನು ಸೆಳೆಯುತ್ತಿದೆ ಮೈದುಂಬಿ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿ

ಈ ಸುದ್ದಿಯನ್ನು ಶೇರ್ ಮಾಡಿ

Laxana-01

ಹುಣಸೂರು, ಜೂ.18- ತಾಲ್ಲೂಕಿನಾದ್ಯಂತ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೆರೆ-ಕಟ್ಟೆಗಳು ಸೇರಿದಂತೆ ಜೀವ ನದಿ , ಲಕ್ಷ್ಮಣ ತೀರ್ಥ ನದಿ ಮೈದುಂಬಿ ಹರಿಯುತ್ತಿದ್ದು , ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಕೊಡಗಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಲಕ್ಷ್ಮಣತೀರ್ತ ನದಿಯ ಒಳ ಹರಿವಿನ ಪ್ರಮಾಣವು ಸುದೀರ್ಘವಾಗಿ ಏರಿಕೆ ಕಂಡಿದ್ದು, ನದಿಗೆ ಅಡ್ಡಲಾಗಿ ಕಟ್ಟಿರುವ ತಾಲ್ಲೂಕಿನ ಹನಗೋಡು, ಕಟ್ಟೆ ಮಳಲವಾಡಿ, ಶಿರಿಯೂರು ಅಣೆಕಟ್ಟೆಗಳು ಮೈತುಂಬಿ ಹರಿಯುತ್ತಿದೆ,

ಒಂದೆಡೆ ಅನ್ನದಾತನು ಮೊದಲ ಮಳೆಗೆ ಹರ್ಷಗೊಂಡರೆ, ಕೆಲವು ಪ್ರದೇಶವು ಪ್ರವಾಸಿಗರ ಸ್ಪಾರ್ಟ್‍ಆಗಿ ರೂಪುಗೊಳ್ಳುತ್ತಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಉತ್ತಮ ಮಳೆಯಾಗದಿದ್ದರಿಂದ ನದಿಯೂ ಸಾಕಷ್ಟು ಬತ್ತಿ ಹೋಗಿತ್ತು. ಇದೀಗ ಬೀಳುತ್ತಿರುವ ವರ್ಷಧಾರೆಯು ಸಾರ್ವಜನಿಕರಿಗೆ ಹಾಗೂ ರೈತಾಪಿ ವರ್ಗಕ್ಕೆ ಖುಷಿ ಉಂಟು ಮಾಡಿದೆ.

Laxana-03

ಸೆಲ್ಫಿ ಸ್ಪಾರ್ಟ್‍ಗಳಿವು :

ನಗರದ ನದಿಯಂಚಿನಲ್ಲಿರುವ ನಗರಸಭೆಯ ನೀರು ಪಂಪ್ ಮಾಡುವ ಕಟ್ಟಡದ ಪಕ್ಕದಲ್ಲಿ ತಡೆ ಗೋಡೆಯ ಮೇಲೆ ನೀರು ಹರಿದು ಬರುವುದನ್ನು ಅಲ್ಲಿಯೇ ನಿರ್ಮಿಸಿರುವ ತೂಗು ಸೇತುವೆಯ ಮೇಲೆ ನಿಂತು ವೀಕ್ಷಿಸುವುದು, ಚಿತ್ರ ಸೆರೆ ಹಿಡಿಯುವುದು, ಕಟ್ಟೆ ಮಳಲವಾಡಿಯಲ್ಲಿ ಕಟ್ಟೆಯ ಮೇಲೆ ರಭಸವಾಗಿ ಹರಿಯುವ ಜಲಧಾರೆಯನ್ನು ಸಾಲು ಸಾಲು ನಿಂತು ಸಾರ್ವಜನಿಕರು ವೀಕ್ಷಿಸುತ್ತಿದ್ದಾರೆ. ಹಾಗೆಯೇ ಹನಗೋಡು ಅಣೆಕಟ್ಟೆ, ಶಿರಿಯೂರು ಅಣೆಕಟ್ಟೆಯಲ್ಲಿಯೂ ಇದೇ ಸ್ಥಿತಿ ಈಗ ಬದಲಾಗಿರುವ ಟ್ರೆಂಡ್‍ನಿಂದ ಫೇಸ್‍ಬುಕ್‍ನ ಪುಟದಲ್ಲಿ ಲೈವ್ ವಿಡಿಯೋ ರವಾನಿಸುವುದು ಮತ್ತೊಂದು ಟ್ರೆಂಡ್ ಆಗಿದೆ.

ನೀರು ಬಿಟ್ಟರೆ ರೈತರಿಗೆ ನೆರವಾಗಲಿದೆ :

ಹನಗೋಡು ಅಣೆಕಟ್ಟೆಯಿಂದ ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕುಗಳ 40 ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಮುಂದಾಗಿದ್ದು, ಈ ಅಣೆಕಟ್ಟೆಯ ಮುಖ್ಯ ನಾಲೆಗಳಾದ ಹನುಮಂತಪುರ ಮತ್ತು ಉದ್ದೂರು ನಾಲೆಗಳಿಂದ ಸುಮಾರು 48 ಸಾವಿರ ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಈಗಾಗಲೇ ನೀರು ತುಂಬಿದ್ದರಿಂದ ಬಿಡುಗಡೆಗೊಳಿಸಿದ್ದಲ್ಲಿ ರೈತರಿಗೆ ನೆರವಾಗಲಿದೆ. ನಗರದ ಮಧ್ಯ ಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯು ನೀರಿಲ್ಲದೆ ಸೊರಗಿ ಬೆಳೆದಿದ್ದ ಗಿಡ ಗಂಟೆಗಳು ಹಾಗೂ ನದಿಯ ಪಾತ್ರದಿಂದ ಹರಿದು ಹೊತ್ತು ತಂದಿರುವ ತ್ಯಾಜ್ಯಗಳು ನದಿಗೆ ಅಳವಡಿಸಿರುವ ನೀರಿನ ಮಾರ್ಗದ ಪೈಪ್‍ನಿಂದ ತಡೆಯಾಗಿದ್ದು, ಇದರಿಂದ ತ್ಯಾಜ್ಯಗಳೆಲ್ಲವೂ ನದಿಯಲ್ಲಿಯೇ ಉಳಿಯುವ ಬೀತಿ ಎದುರಾಗಿದ್ದು, ಸ್ಥಳೀಯ ನಗರಸಭೆ ಅಧಿಕಾರಿಗಳು ಇತ್ತಕಡೆ ಗಮನಹರಿಸ ಬೇಕೆನ್ನುವುದು ನಾಗರಿಕರ ಅಹವಾಲಾಗಿದೆ.

Laxana-02

ಹನಗೋಡು ಅಣೆಕಟ್ಟೆ :
ಹುಣಸೂರು ತಾಲ್ಲೂಕಿನ ಹನಗೋಡಿನಲ್ಲಿ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ಕಟ್ಟಿರುವ ಹನಗೋಡು ಅಣೆಕಟ್ಟೆಯ ಮೇಲೆ 3-4ಅಡಿ ಎತ್ತರಕ್ಕೆ ನದಿಯೂ ಉಕ್ಕಿಹರಿಯುತ್ತಿದ್ದು, ಇದನ್ನು ಸಹ ವೀಕ್ಷಿಸಲು ಯುವಜನತೆ ಹಿಂಡು ಹಿಂಡಾಗಿ ಬರುತ್ತಿದ್ದಾರೆ. ಹಾಗೆಯೇ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಕೆಲ ಪ್ರದೇಶದಲ್ಲಿ ಬೆಳೆಯೂ ನೀರು ಪಾಲಾಗಿದೆ.

ಪ್ರವಾಸಿ ತಾಣವಾದ ತೂಗುಸೇತುವೆ :
ನಗರದಲ್ಲಿ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಬಳಿ ಕಾಲೇಜು ವಿದ್ಯಾರ್ಥಿಗಳು, ವಯೋವೃದ್ದರು ತಂಡೋಪತಂಡವಾಗಿ ಆಗಮಿಸಿ ಧುಮ್ಮಿಕ್ಕಿ ಹರಿಯುವ ನದಿಯನ್ನು ಕಣ್ತುಂಬಿಕೊಳ್ಳುತ್ತಿದ್ದರೆ ವಿನೂತನ ಅನುಭವ ನೀಡುವ ತೂಗು ಸೇತುವೆಯಲ್ಲಿ ನಡೆಯುವುದರಲ್ಲೇ ಮಜಾ ತೆಗೆದುಕೊಳ್ಳುತ್ತಿದ್ದಾರೆ ಚಿಣ್ಣರು.

Facebook Comments

Sri Raghav

Admin