ಟ್ಯೂಷನ್ ಗೆ ತೆರಳಿದ್ದ 6 ಮಕ್ಕಳು ನಾಪತ್ತೆ..! ಆತಂಕದಲ್ಲಿ ಪೋಷಕರು

ಈ ಸುದ್ದಿಯನ್ನು ಶೇರ್ ಮಾಡಿ

6-Students-Missing--01
ಬೆಂಗಳೂರು, ಜೂ.19-ಮನೆ ಪಾಠ ಹಾಗೂ ಸ್ನೇಹಿತರ ಮನೆಗೆಂದು ತೆರಳಿದ್ದ 9ನೇ ತರಗತಿಯ ಆರು ಮಂದಿ ಬಾಲಕರು ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ಸೆಂಟ್ ಲಾರೆನ್ಸ್ ಶಾಲೆಯ ವಿದ್ಯಾರ್ಥಿಗಳಾದ ರಾಕೇಶ್, ಸುಜನ್‍ಶೆಟ್ಟಿ, ಚಂದನ್, ಅನೂಪ್, ರೇಣು ಮತ್ತು ವರುಣ್ ನಾಪತ್ತೆಯಾಗಿರುವ ಬಾಲಕರು.

ನಿನ್ನೆ ಸಂಜೆ 5 ಗಂಟೆ ಸಮಯದಲ್ಲಿ ಚಂದನ್ ಎಂಬಾತ ಶಾಲೆ ಮುಗಿಸಿಕೊಂಡು ವಾಪಸ್ ಮನೆಗೆ ಬಂದು ಎಂದಿನಂತೆ ಮನೆ ಸಮೀಪದಲ್ಲೇ ಇರುವ ಟ್ಯೂಷನ್‍ಗೆ ಹೋಗುವುದಾಗಿ ಹೇಳಿ ತನ್ನ ಸ್ನೇಹಿತರಾದ ರಾಕೇಶ್, ಸುಜನ್‍ಶೆಟ್ಟಿ, ಅನೂಪ್, ವರುಣ್, ರೇಣು ಎಂಬುವರೊಂದಿಗೆ ಹೋಗಿದ್ದಾನೆ. ಆದರೆ ಈತ ಟ್ಯೂಷನ್‍ಗೂ ಹೋಗದೆ, ಮನೆಗೂ ಬಾರದೆ ಸ್ನೇಹಿತರೊಂದಿಗೆ ನಾಪತ್ತೆಯಾಗಿದ್ದಾನೆ.

ರಾತ್ರಿ ಟ್ಯೂಷನ್‍ನಿಂದ ಮನೆಗೆ ಬಾರದ ಚಂದನ್‍ನನ್ನು ಪೋಷಕರು ತಡರಾತ್ರಿಯವರೆಗೂ ಸ್ನೇಹಿತರನ್ನು ವಿಚಾರಿಸಿದಾಗ ಈತನೊಂದಿಗೆ ಐದು ಮಂದಿ ಗೆಳೆಯರು ನಾಪತ್ತೆಯಾಗಿರುವುದು ತಿಳಿದುಬಂದಿದೆ.  ನಾಪತ್ತೆಯಾಗಿರುವ ಬಾಲಕರ ಪೈಕಿ ಒಬ್ಬನ ಬಳಿ ಮೊಬೈಲ್ ಇದ್ದು, ಅದು ಪ್ರಸ್ತುತ ಸ್ವಿಚ್ ಆಫ್ ಆಗಿರುವುದರಿಂದ ಪೋಷಕರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂಡ ರಚನೆ:
ನಾಪತ್ತೆಯಾಗಿರುವ ಆರು ಮಂದಿ ಬಾಲಕರ ಪತ್ತೆಗಾಗಿ ವಿಜಯನಗರ ಉಪವಿಭಾಗದ ಎಸಿಪಿ ಪರಮೇಶ್ವರ ಹೆಗಡೆ ಅವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ತಂಡ ಈಗಾಗಲೇ ಪತ್ತೆ ಕಾರ್ಯದಲ್ಲಿ ತೊಡಗಿದೆ.ರಾಜ್ಯದ ಎಲ್ಲಾ ಜಿಲ್ಲಾ ಕಂಟ್ರೋಲ್ ರೂಂಗಳಿಗೂ ಈ ಬಾಲಕರ ಛಾಯಾಚಿತ್ರಗಳನ್ನು ರವಾನಿಸಿದ್ದು, ವಿವಿಧ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಬಾಲಕರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಯಾರಿಗಾದರೂ ಈ ಬಾಲಕರ ಬಗ್ಗೆ ಮಾಹಿತಿ ದೊರಕಿದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಾಗಲಿ ಅಥವಾ ವಿಜಯನಗರ ಉಪವಿಭಾಗದ ಎಸಿಪಿ ದೂ.ಸಂ.9480801707, ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‍ಪೆಕ್ಟರ್-9480801728, ಪಶ್ಚಿಮ ನಿಯಂತ್ರಣ ಕೊಠಡಿ 080-22943232, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ-080-22942517 ಹಾಗೂ ಪೊಲೀಸ್ ಕಂಟ್ರೋಲ್ ರೂಂ-100ಕ್ಕೆ ಕರೆ ಮಾಡಲು ಮನವಿ ಮಾಡಲಾಗಿದೆ.

Facebook Comments

Sri Raghav

Admin