ಎಂಪಿ, ಎಂಎಲ್‍ಎಗಳ ಮೇಲಿನ 791 ಕೇಸ್‍ಗಳು ತ್ವರಿತ ನ್ಯಾಯಾಲಯಕ್ಕೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Polititions-Criminals

ನವದೆಹಲಿ, ಜೂ.19- ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ 791 ಪ್ರಕರಣಗಳನ್ನು ಕೇಂದ್ರ ಸರ್ಕಾರ 12 ತ್ವರಿತ ವಿಚಾರಣಾ ನ್ಯಾಯಾಲಯಗಳಿಗೆ(ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗಳು ಅಥವಾ ಎಫ್‍ಟಿಸಿಗಳು) ವರ್ಗಾವಣೆ ಮಾಡಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದ ಅದರಲ್ಲೂ ಕಾನೂನು ಇಲಾಖೆಯ ಸಾಧನೆಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಸಚಿವರು, ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಇದೇ ಉದ್ದೇಶಕ್ಕಾಗಿ 12 ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು.

ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಸಂಸದರು ಮತ್ತು ಶಾಸಕರ ವಿರುದ್ಧ ಒಟ್ಟು 791 ವಿವಿಧ ಪ್ರಕರಣಗಳಿವೆ. ಇವುಗಳ ತ್ವರಿತ ವಿಚಾರಣೆಗಾಗಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸರ್ಕಾರವು 11 ರಾಜ್ಯಗಳಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಶಿಕ್ಷೆಗೆ ಗುರಿಯಾಗಿರುವ ಸಂಸದರು ಮತ್ತು ಶಾಸಕರು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಸರ್ಕಾರವನ್ನು ಆಗ್ರಹಿಸಿರುವುದರಿಂದ ಈ ಬೆಳವಣೆಗೆ ಮಹತ್ವ ಪಡೆದುಕೊಂಡಿದೆ.ಒಟ್ಟು 1,765 ಸಂಸದರು ಮತ್ತು ಶಾಸಕರು (ಸಂಸತ್ತು ಮತ್ತು ವಿಧಾನಸಭೆಯ ಶೇ.36ರಷ್ಟು) 3,045 ಪ್ರಕರಣಗಳಲ್ಲಿ ಕ್ರಿಮಿನಲ್ ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಈ ವರ್ಷದ ಆರಂಭದಲ್ಲಿ ಸುಪ್ರೀಂಕೋರ್ಟ್‍ಗೆ ನೀಡಿದ್ದ ಪ್ರಮಾಣಪತ್ರದಲ್ಲಿ ತಿಳಿಸಿತ್ತು.

ಇನ್ನೊಂದು ವರ್ಷದೊಳಗೆ ವಿಚಾರಣೆಗಳನ್ನು ಪೂರ್ಣಗೊಳಿಸುವುದಕ್ಕಾಗಿ ಈ ಎಲ್ಲ ಪ್ರಕರಣಗಳನ್ನು ತ್ವರಿತ ವಿಚಾರಣಾ ನ್ಯಾಯಾಲಯ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ತಮಿಳುನಾಡು, ಬಿಹಾರ, ಪಶ್ವಿಮ ಬಂಗಾಳ, ಆಂಧ್ರಪ್ರದೇಶ, ಮತ್ತು ಕೇರಳ ನಂತರದ ಸ್ಥಾನಗಳಲ್ಲಿವೆ.

ಮಹಿಳೆಯರು, ಎಸ್‍ಸಿ/ಎಸ್‍ಟಿ ಸಮುದಾಯದವರು, ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲೆ ಎಸಗಲಾಗಿರುವ ಪ್ರಕರಣಗಳ ವಿಚಾರಣೆ ತೀವ್ರಗೊಳಿಸಲು ಕೇಂದ್ರ ಸರ್ಕಾರ ಈಗಾಗಲೇ 727 ಎಫ್‍ಟಿಸಿಗಳನ್ನು ಸ್ಥಾಪಿಸಿದೆ.

Facebook Comments

Sri Raghav

Admin