ಬಜೆಟ್‍ನಲ್ಲಿ ಕೆಲ ಯೋಜನೆಗಳ ಅನುದಾನ ಕಡಿತಕ್ಕೆ ಸಿಎಂ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-CM

ಬೆಂಗಳೂರು,ಜೂ.19- ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳಲೇಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‍ನಲ್ಲಿ ಕೆಲ ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸಲು ಗಂಭೀರ ಚಿಂತನೆ ನಡೆಸಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ಬಜೆಟ್‍ನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಲಿ ದ್ದಾರೆ.

ಈಗಾಗಲೇ ಬಜೆಟ್ ಮಂಡನೆ ಮಾಡುವ ಸಂಬಂಧ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ನಡೆಸಿ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ.  ಇದೇ 21ರಿಂದ ಇಲಾಖಾವಾರು ಸಭೆ ನಡೆಸಲಿದ್ದು, ಯಾವ ಯಾವ ಇಲಾಖೆಗೆ ಹಿಂದಿನ ಸರ್ಕಾರ ಎಷ್ಟು ಅನುದಾನ ನಿಗದಿಪಡಿಸಿತ್ತು. ಇದರಲ್ಲಿ ಖರ್ಚಾಗಿರುವ ಹಣ ಮತ್ತು ಯೋಜನೆಗಳ ಸಂಪೂರ್ಣ ವಿವರವನ್ನು ಪಡೆಯಲಿದ್ದಾರೆ.  ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡ ಬೇಕಾದರೆ ಬೊಕ್ಕಸಕ್ಕೆ ಸರಿಸುಮಾರು 53 ಸಾವಿರ ಕೋಟಿ ಹೊರೆಯಾಗುತ್ತದೆ. ಕಳೆದ ಮಾರ್ಚ್‍ನಲ್ಲಿ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆಯಾಗಿತ್ತು. ಈ ವೇಳೆ ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸುಮಾರು 50 ಸಾವಿರ ಹೊರಗಿನ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು.

ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಎಂಟೂವರೆ ಸಾವಿರ ಕೋಟಿ ಹೊರೆ ಯಾಗಿತ್ತು. ಕೇವಲ ಆರು ತಿಂಗಳ ಅವಧಿಯೊಳಗೆ ಎರಡನೇ ಬಜೆಟ್ ಮಂಡನೆಯಾಗಲಿದೆ. ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಕುಮಾರಸ್ವಾಮಿ ಅವರು ಜನಪ್ರಿಯ ಯೋಜನೆಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತಿಗೆ ಒತ್ತು ನೀಡಿ ಜನಸಾಮಾನ್ಯರಿಗೆ ಹೊರೆಯಾಗದ ಬಜೆಟ್ ಮಂಡನೆ ಮಾಡಲಿದ್ದಾರೆ.  ಭಾಗ್ಯ ಯೋಜನೆಗಳಿಗೆ ಅನುದಾನ ಕಡಿತ: ತಮ್ಮ ಬಜೆಟ್‍ನಲ್ಲಿ ಕುಮಾರಸ್ವಾಮಿ ಅವರು ಹಿಂದಿನ ಸರ್ಕಾರದ ಕೆಲವು ಭಾಗ್ಯ ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸುವ ಸಂಭವವಿದೆ. ತಮ್ಮ ಸರ್ಕಾರಿ ಅವಧಿಯಲ್ಲಿನ ಯಾವುದೇ ಕಾರ್ಯಕ್ರಮಗಳನ್ನು ರದ್ದುಪಡಿಸದೆ ಮುಂದುವರೆಸುವಂತೆ ಕಾಂಗ್ರೆಸ್ ಈಗಾಗಲೇ ಪಟ್ಟು ಹಿಡಿದಿದೆ. ಹೀಗಾಗಿ ಮೊದಲ ಬಜೆಟ್‍ನಲ್ಲಿ ಜೆಡಿಎಸ್‍ನ ಕೆಲವು ಯೋಜನೆಗಳನ್ನು ಮಾತ್ರ ಸೇರ್ಪಡೆ ಮಾಡಿ ಚುನಾವಣೆಯಲ್ಲಿ ಮತ ಬ್ಯಾಂಕ್ ಸೃಷ್ಟಿಸುವ ಭಾಗ್ಯಗಳಿಗೆ ಅನುದಾನ ಕಡಿತವಾಗಲಿದೆ.

ಆದರೆ ಹಿಂದಿನ ಸರ್ಕಾರಕ್ಕೆ ಒಂದಿಷ್ಟು ಯಶಸ್ಸು ಮತ್ತು ಕೀರ್ತಿ ತಂದುಕೊಟ್ಟಿದ್ದ ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಮುಂದುವರೆಯಲಿದೆ. ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಪ್ರತಿ ತಿಂಗಳು ಒಬ್ಬ ಸದಸ್ಯರಿಗೆ 7 ಕೆ.ಜಿ. ಅಕ್ಕಿ, ಬೇಳೆ, ಉಪ್ಪು ವಿತರಣೆ ಮಾಡುವ ಕಾರ್ಯಕ್ರಮ ಮುಂದುವರೆಯಲಿದೆ.  ಇನ್ನು ಸರ್ಕಾರಿ ಶಾಲೆಗಳಲ್ಲಿ 1ರಿಂದ 5 ತರಗತಿವರೆಗಿನ ಮಕ್ಕಳಿಗೆ ವಾರದಲ್ಲಿ ಮೂರು ದಿನ ನೀಡುತ್ತಿರುವ ಕ್ಷೀರ ಭಾಗ್ಯವು ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಉಳಿದಂತೆ ಶಾದಿ ಭಾಗ್ಯ, ದಂತ ಭಾಗ್ಯ, ಪಶುಭಾಗ್ಯ, ಆರೋಗ್ಯ ಭಾಗ್ಯ, ಕ್ಷೀರಧಾರೆ, ರಾಜೀವ್ ಆರೋಗ್ಯ ಭಾಗ್ಯ, ಋಣಮುಕ್ತ ಭಾಗ್ಯ, ವಿದ್ಯಾಸಿರಿ ಸೇರಿದಂತೆ ಜನಪ್ರಿಯ ಯೋಜನೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಗಣನೀಯ ಪ್ರಮಾಣದಲ್ಲಿ ಕಡಿತ ಗೊಳಿಸಲಿದ್ದಾರೆ.  ರೈತರ ಸಾಲ ಮನ್ನಾ ಮಾಡಲು ಕೆಲವು ಷರತ್ತುಗಳನ್ನು ವಿಧಿಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ 20ರಿಂದ 22 ಸಾವಿರ ಕೋಟಿ ಹೊರೆಯಾಗಲಿದೆ.  ಭಾಗ್ಯ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದರೆ ಸರ್ಕಾರಕ್ಕೆ 5ರಿಂದ 8 ಸಾವಿರ ಕೋಟಿ ಉಳಿತಾಯವಾಗಲಿದೆ. ಇದೇ ರೀತಿ ಬೆಂಗಳೂರು ಸುತ್ತಮುತ್ತ ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದ್ದ ಸರ್ಕಾರಿ ಜಮೀನನ್ನು ಹರಾಜು ಹಾಕಿ ಅದರಿಂದ ಬರುವ ಆದಾಯದಿಂದ ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ.

Facebook Comments

Sri Raghav

Admin