ನಾಪತ್ತೆಯಾಗಿದ್ದ ಮಕ್ಕಳು ಅತ್ತೆ ಮನೆಯಲ್ಲಿ ಪತ್ತೆ, ನಿಟ್ಟುಸಿರು ಬಿಟ್ಟ ಪೋಷಕರು

ಈ ಸುದ್ದಿಯನ್ನು ಶೇರ್ ಮಾಡಿ

6-Students-Missing--01

ಬೆಂಗಳೂರು, ಜೂ.19- ನಾಪತ್ತೆಯಾಗಿದ್ದ ಆರು ಮಂದಿ ಶಾಲಾ ಬಾಲಕರು ಮಾಗಡಿಯಲ್ಲಿ ಪತ್ತೆಯಾಗಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಾಗಡಿಯಲ್ಲಿರುವ ರಾಕೇಶ್ ಅವರ ಅತ್ತೆ ಮನೆಯಲ್ಲಿ ಇವರೆಲ್ಲರೂ ಪತ್ತೆಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮಾಗಡಿಗೆ ತೆರಳಿದ್ದು ಬಾಲಕರನ್ನು ಕರೆತಂದಿದ್ದಾರೆ.

ಮನೆ ಪಾಠ ಹಾಗೂ ಸ್ನೇಹಿತರ ಮನೆಗೆಂದು ತೆರಳಿದ್ದ 9ನೇ ತರಗತಿಯ ಆರು ಮಂದಿ ಬಾಲಕರ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ. ಸೆಂಟ್ ಲಾರೆನ್ಸ್ ಶಾಲೆಯ ವಿದ್ಯಾರ್ಥಿಗಳಾದ ರಾಕೇಶ್, ಸುಜನ್‍ಶೆಟ್ಟಿ, ಚಂದನ್, ಅನೂಪ್, ರೇಣು ಮತ್ತು ವರುಣ್ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದರು.

ನಿನ್ನೆ ಸಂಜೆ 5 ಗಂಟೆ ಸಮಯದಲ್ಲಿ ಚಂದನ್ ಎಂಬಾತ ಶಾಲೆ ಮುಗಿಸಿಕೊಂಡು ವಾಪಸ್ ಮನೆಗೆ ಬಂದು ಎಂದಿನಂತೆ ಮನೆ ಸಮೀಪದಲ್ಲೇ ಇರುವ ಟ್ಯೂಷನ್‍ಗೆ ಹೋಗುವುದಾಗಿ ಹೇಳಿ ತನ್ನ ಸ್ನೇಹಿತರಾದ ರಾಕೇಶ್, ಸುಜನ್‍ಶೆಟ್ಟಿ, ಅನೂಪ್, ವರುಣ್, ರೇಣು ಎಂಬುವರೊಂದಿಗೆ ಹೋಗಿದ್ದಾನೆ. ಆದರೆ ಈತ ಟ್ಯೂಷನ್‍ಗೂ ಹೋಗದೆ, ಮನೆಗೂ ಬಾರದೆ ಸ್ನೇಹಿತರೊಂದಿಗೆ ನಾಪತ್ತೆಯಾಗಿದ್ದನು.

ರಾತ್ರಿ ಟ್ಯೂಷನ್‍ನಿಂದ ಮನೆಗೆ ಬಾರದ ಚಂದನ್‍ನನ್ನು ಪೋಷಕರು ತಡರಾತ್ರಿಯವರೆಗೂ ಸ್ನೇಹಿತರನ್ನು ವಿಚಾರಿಸಿದಾಗ ಈತನೊಂದಿಗೆ ಐದು ಮಂದಿ ಗೆಳೆಯರು ನಾಪತ್ತೆಯಾಗಿರುವುದು ತಿಳಿದುಬಂದಿತ್ತು. ನಾಪತ್ತೆಯಾಗಿರುವ ಬಾಲಕರ ಪೈಕಿ ಒಬ್ಬನ ಬಳಿ ಮೊಬೈಲ್ ಇದ್ದು, ಅದು ಸ್ವಿಚ್ ಆಫ್ ಆಗಿದ್ದರಿಂದ ಪೋಷಕರು ಮತ್ತಷ್ಟು ಆತಂಕಕ್ಕೊಳಗಾಗಿ.ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು.

ತಂಡ ರಚನೆ:
ನಾಪತ್ತೆಯಾಗಿರುವ ಆರು ಮಂದಿ ಬಾಲಕರ ಪತ್ತೆಗಾಗಿ ವಿಜಯನಗರ ಉಪವಿಭಾಗದ ಎಸಿಪಿ ಪರಮೇಶ್ವರ ಹೆಗಡೆ ಅವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು, ಈ ತಂಡ ಪತ್ತೆ ಕಾರ್ಯದಲ್ಲಿ ತೊಡಗಿತ್ತು. ಇದರ  ಜೊತೆಗೆ ರಾಜ್ಯದ ಎಲ್ಲಾ ಜಿಲ್ಲಾ ಕಂಟ್ರೋಲ್ ರೂಂಗಳಿಗೂ ಈ ಬಾಲಕರ ಛಾಯಾಚಿತ್ರಗಳನ್ನು ರವಾನಿಸಿದ್ದು, ವಿವಿಧ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಬಾಲಕರ ಪತ್ತೆಗಾಗಿ ಶೋಧ ಕಾರ್ಯನಡೆದಿತ್ತು. ಮಧ್ಯಾಹ್ನದ ವೇಳೆಗೆ ಬಾಲಕರು ಮಾಗಡಿಯಲ್ಲಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲೇ ಪೋಷಕರಲ್ಲಿ ಮನೆಮಾಡಿದ್ದ ಆತಂಕ ದೂರವಾಗಿದೆ.

Facebook Comments