ಚೀನಾ ಪ್ರತಿ ವರ್ಷ 500 ಶತಕೋಟಿ ಡಾಲರ್ ಹಣ ಕೊಳ್ಳೆ ಹೊಡೆಯುತ್ತಿದೆ : ಟ್ರಂಪ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜೂ.20-ಅಕ್ರಮ ವ್ಯಾಪಾರ ನೀತಿಗಳ ಮೂಲಕ ಚೀನಾ ಪ್ರತಿ ವರ್ಷ ಅಮೆರಿಕದಿಂದ 500 ಶತಕೋಟಿ ಡಾಲರ್‍ಗಳಷ್ಟು ಹಣ ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮೂಲಕ ಚೀನಾ ಪುನರ್‍ನಿರ್ಮಾಣಕ್ಕೆ ತಮ್ಮ ರಾಷ್ಟ್ರವು ನೆರವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ವಾಷಿಂಗ್ಟನ್‍ನಲ್ಲಿ ನಡೆದ ರಾಷ್ಟ್ರೀಯ ಸ್ವತಂತ್ರ ವಾಣಿಜ್ಯ ಒಕ್ಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೀನಾ ಏನು ಮಾಡುತ್ತಿದೆ ಎಂಬುದನ್ನು ನೀವೇ ನೋಡಿ. ಅನೇಕ ವರ್ಷಗಳಿಂದ ಚೀನಾ ಅಮೆರಿಕದ ಹಣವನ್ನು ಕೊಳ್ಳೆ ಹೊಡೆಯುತ್ತಿದೆ. ನಮ್ಮ ದೇಶದಿಂದ ಪ್ರತಿ ವರ್ಷ 500 ಶತಕೋಟಿ ಡಾಲರ್‍ಗಳನ್ನು ಅದು ಲೂಟಿ ಮಾಡುತ್ತಿದೆ ಹಾಗೂ ಇದರಿಂದ ಚೀನಾ ಪುನರ್‍ನಿರ್ಮಾಣಗೊಂಡಿದೆ ಎಂದು ಆರೋಪಿಸಿದರು.

ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ತೀವ್ರ ಉಲ್ಬಣಗೊಂಡಿರುವಾಗಲೇ, ಅಕ್ರಮ ವ್ಯಾಪಾರ-ವಹಿವಾಟು ದಂಧೆಯನ್ನು ನಿಲ್ಲಿಸದಿದ್ದರೆ ಚೀನಾ ಸರಕುಗಳ ಮೇಲೆ ಮತ್ತೆ ಹೆಚ್ಚುವರಿಯಾಗಿ 200 ಶತಕೋಟಿ ಡಾಲರ್‍ಗಳ ಸುಂಕ ವಿಧಿಸುವುದಾಗಿ ಟ್ರಂಪ್ ನಿನ್ನೆಯಷ್ಟೇ ಎಚ್ಚರಿಕೆ ನೀಡಿದ್ದರು. ಇದಕ್ಕೆ ದಿಟ್ಟ ಪ್ರತ್ಯುತ್ತರ ನೀಡಿರುವ ಚೀನಾ, ಅಮೆರಿಕದ ಬ್ಲಾಕ್‍ಮೇಲ್ ಬೆದರಿಕೆಗೆ ತಾನು ಮಣಿಯುವುದಿಲ್ಲ. ಅಮೆರಿಕ ಮತ್ತೆ ಸುಂಕ ವಿಧಿಸಿದರೆ ಅಷ್ಟೇ ಮೊತ್ತದ ತೆರಿಗೆಯನ್ನು ಆ ದೇಶದ ಸರಕುಗಳ ಮೇಲೆ ಹೇರುವುದಾಗಿ ತಿಳಿಸಿದೆ.

ಈ ಬೆಳವಣಿಗೆಯಿಂದಾಗಿ ವಿಶ್ವದ ಎರಡು ಬೃಹತ್ ಆರ್ಥಿಕ ರಾಷ್ಟ್ರಗಳ ನಡುವಣ ವಾಣಿಜ್ಯ ಸಮರ ಇನ್ನಷ್ಟು ಉಲ್ಬಣಗೊಂಡಿದೆ. ಚೀನಾ ಅಕ್ರಮ ವ್ಯಾಪಾರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಳೆದ ವಾರ ಟ್ರಂಪ್ ಚೀನಿ ಸರಕುಗಳ ಮೇಲೆ 50 ಶತಕೋಟಿ ಡಾಲರ್‍ಗಳ ಸುಂಕ ವಿಧಿಸಿತ್ತು.

Facebook Comments

Sri Raghav

Admin