“ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ, ನನ್ನ ಬಳಿಯೂ ಡೈರಿ ಇದೆ”

ಈ ಸುದ್ದಿಯನ್ನು ಶೇರ್ ಮಾಡಿ

D-K-Shivakumar--01

ಬೆಂಗಳೂರು,ಜೂ.20- ನಾನು ತಪ್ಪು ಮಾಡಿಲ್ಲ. ನ್ಯಾಯವಾಗಿದ್ದೇನೆ. ನನ್ನ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನ್ಯಾಯಾಲಯಕ್ಕೆ, ನ್ಯಾಯಕ್ಕೆ ಗೌರವ ಕೊಡುತ್ತೇನೆ. ಅದರಂತೆ ನಡೆದುಕೊಳ್ಳುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು.
ಐಟಿ ದಾಳಿ ಪ್ರಕರಣದಲ್ಲಿ ನೋಟಿಸ್ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇನು ಹೆದರುವುದಿಲ್ಲ. ನಾನು ತಪ್ಪು ಮಾಡಿಲ್ಲ, ನ್ಯಾಯಬದ್ಧವಾಗಿದ್ದೇನೆ.

ಉದ್ದೇಶಪೂರ್ವಕವಾಗಿಯೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಬಳಿಯೂ ಹಲವಾರು ಡೈರಿಗಳಿವೆ. ಹಲವರ ಹೆಸರುಗಳಿವೆ. ನಾನು ಕೊನೆಯವರೆಗೂ ಕಾದು ನೋಡುತ್ತೇನೆ. ಎಲ್ಲಿ, ಯಾವ ಸಂದರ್ಭದಲ್ಲಿ ಮಾತನಾಡಬೇಕೋ ಆಗ ಮಾತನಾಡುತ್ತೇನೆ. ಸಮಯ ಬಂದಾಗ ಡೈರಿಗಳನ್ನು ಹೊರಬಿಡುವುದು ನನಗೂ ಗೊತ್ತು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.ನನಗೆ ಕೋರ್ಟ್‍ನಿಂದ ಯಾವುದೇ ಸಮನ್ಸ್ ಬಂದಿಲ್ಲ. ನೋಟೀಸ್ ಬಂದಿದೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು. ಐಟಿ ಅಧಿಕಾರಿಗಳಿಗೆ ಯಾವ ಒತ್ತಡವಿದೆಯೋ ಗೊತ್ತಿಲ್ಲ. ಬಿಜೆಪಿ ಸ್ನೇಹಿತರು ರಾಜೀನಾಮೆ ಕೇಳುತ್ತಿದ್ದಾರೆ. ಸೂಕ್ತ ಕಾಲದಲ್ಲಿ ಅವರಿಗೆ ಉತ್ತರ ನೀಡುತ್ತೇನೆ ಎಂದರು.

ಪ್ರಕರಣ ನ್ಯಾಯಾಲಯದಲ್ಲಿದ್ದು, ಎಲ್ಲದಕ್ಕೂ ನ್ಯಾಯಾಲಯದಲ್ಲೇ ಉತ್ತರ ನೀಡುತ್ತೇನೆ. ಕಾನೂನಿಗೆ ಗೌರವ ಕೊಡುತ್ತಾ ಬಂದಿದ್ದೇವೆ, ಮುಂದೆಯೂ ಕೊಡುತ್ತೇವೆ. ಈ ರೀತಿ ಟಾರ್ಗೆಟ್ ಮಾಡಿ ಹೆದರಿಸಲು ಬಂದರೆ ಹೆದರುವುದಿಲ್ಲ ಎಂದು ಹೇಳಿದರು.ಐಟಿ ಪ್ರಕರಣದಲ್ಲಿ ನನಗಷ್ಟೇ ಅಲ್ಲ, ನನ್ನ ಸಂಬಂಧಿಕರಿಗೆ, ಆಪ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ಯಾರು ಮಾಡಿಸುತ್ತಿದ್ದಾರೆ, ಅವರ ಹಿನ್ನೆಲೆ ಏನೆಂದು ನನಗೆ ಗೊತ್ತು. ಅದನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.  ಏನೋ ಪ್ರಮಾದವಾಗಿದೆ ಎಂದು ನೀವು ಬಿಂಬಿಸುತ್ತೀರ. ನಿಮಗೆ ಹೇಗೆ ಸಂತೋಷವಾಗುತ್ತದೋ ಹಾಗೆ ಮಾಡಿ. ಅವರಿಗೆ ಹೇಗೆ ಸಂತೋಷವಾಗುತ್ತದೆಯೋ ಹಾಗೆ ಮಾಡಲಿ. ಕೊನೆಗೆ ದೇಶದ ಕಾನೂನು ಅಂತ ಒಂದಿದೆ. ಅದರ ಮೇಲೆ ನನಗೆ ನಂಬಿಕೆ ಇದೆ ಎಂದು ಶಿವಕುಮಾರ್ ಹೇಳಿದರು.

Facebook Comments

Sri Raghav

Admin