‘ಯೋಗ’ ರಾಜನೇ ನಿರೋಗಿ..!

ಈ ಸುದ್ದಿಯನ್ನು ಶೇರ್ ಮಾಡಿ

yoga

ಇಂದಿನ ಆಧುನಿಕ ಸಮಾಜದಲ್ಲಿ ಮಾನವ ತನ್ನ ದೈನಂದಿನ ಬೇಡಿಕೆಗಳನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಜೀವನ ಮಟ್ಟವನ್ನು ಸುಧಾರಿಸುವ ಸೋಗಿನಲ್ಲಿ ಅನಗತ್ಯ ಕೃತಕ ಸೌಲಭ್ಯಗಳು, ಸಾಧನಗಳನ್ನು ಮಿತಿಮೀರಿ ಪಡೆಯುತ್ತಿದ್ದಾನೆ. ಇದರ ಫಲವಾಗಿ ಶ್ರಮವಿಲ್ಲದ ಹೆಚ್ಚಿನ ವಿರಾಮ ಲಭಿಸುತ್ತಿದೆ. ಹಾಗಾಗಿ ಮನೆ ಮಂದಿ ಸೋಮಾರಿಯಾಗುತ್ತಿದ್ದಾರೆ. ಆಲಸ್ಯ, ಜಡತ್ವ ಹೆಚ್ಚಿ ದೇಹದಲ್ಲಿ ಕೊಬ್ಬು ಶೇಖರಣೆಗೆ ದಾರಿಯಾಗುತ್ತದೆ. ಆಹಾರ-ವಿಹಾರ ಕ್ರಮಗಳಲ್ಲಿ, ಆಚಾರ-ವಿಚಾರಗಳಲ್ಲಿ ಬದಲಾವಣೆ ಉಂಟಾಗುತ್ತಿರುವುದರಿಂದ ಸಮಾಜ ದಲ್ಲಿ ಮಾನಸಿಕ ಮತ್ತು ದೈಹಿಕ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಏರುತ್ತಿದೆ.
ಮನೆಯ ಯಜಮಾನ ಪರಿಸ್ಥಿತಿ ಶೋಚನೀಯವಾಗಿದ್ದರೂ ಆತನಿಗೆ ತನ್ನ ಸ್ಥಿತಿ ಅರಿವಾಗುತ್ತಿಲ್ಲ. ಗೊತ್ತುಗುರಿಯಿಲ್ಲದ ಮಾರ್ಗದಲ್ಲಿ ಆತ ಶ್ರಮಿಸುತ್ತಿದ್ದಾನೆ. ದಿನೇ ದಿನೇ ಹೆಚ್ಚುತ್ತಿರುವ ಕುಟುಂಬದ ಬೇಡಿಕೆಗಳನ್ನು ಪೂರೈಸಬೇಕಾದರೆ ಹೆಚ್ಚು ಹಣ ಗಳಿಸಬೇಕು. ಅಧಿಕ ಸಂಪಾದನೆ ಮಾಡಬೇಕಾದರೆ ಹೆಚ್ಚು ದುಡಿಮೆ ಮಾಡಬೇಕು. ವಿಶ್ರಾಂತಿ ಇಲ್ಲದ ಮೇರೆ ಮೀರಿ ದುಡಿಮೆ ಮಾಡುವುದರಿಂದ ವಿರಾಮಕ್ಕೆ ಮೀಸಲಾದ ಅವಧಿ ಕಡಿಮೆಯಾಗುತ್ತದೆ; ಅಗತ್ಯವಾದಷ್ಟು ಕಾಲ ನಿದ್ದೆ ಮಾಡಲು ಅವಕಾಶವಿರುವುದಿಲ್ಲ. ಅವಿರತ ದುಡಿಮೆಯಿಂದಾಗಿ ದೇಹದ ಪರಿಶ್ರಮ ಹೆಚ್ಚಾಗುತ್ತದೆ ಹಾಗೂ ಶರೀರ ವಿಪರೀತ ಬಳಲುತ್ತದೆ.

ಇಂತಹ ಮಂದಿ ಬಳಲಿದ ದೇಹವನ್ನು ಮತ್ತೆ ಮತ್ತೆ ಚುರುಕುಗೊಳಿಸಲು ಕಾಫಿ, ಚಹಾ, ಹೊಗೆಸೊಪ್ಪು, ತಂಬಾಕು, ಧೂಮಪಾನ, ಮದ್ಯಪಾನ ಇತ್ಯಾದಿ ನರೋತ್ತೇಜಕ ದ್ರವ್ಯಗಳನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಿ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿಕೊಳ್ಳುತ್ತಾರೆ. ಸತತ ಕೆಲಸದ ಜೊತೆಗೆ ಸಮಾಜ ಬಾಹಿರ ಚಟುವಟಿಕೆಗಲ್ಲಿ ತೊಡಗಿದ್ದೇ ಆದರೆ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ಸದಾಕಾಲ ಆತಂಕ, ಅಂಜಿಕೆ, ಭಯ, ಕಳವಳ, ಕೀಳರಿಮೆ, ಖಿನ್ನತೆ ಇವೇ ಮೊದಲಾದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇಂತಹ ವ್ಯಕ್ತಿಯು ಮಾನಸಿಕ ತೊಂದರೆಗಳನ್ನು ಮರೆಯುವ ಸಲುವಾಗಿ ಮದ್ಯಪಾನ ಮಾಡುತ್ತಾನೆ, ಮಾದಕ ವಸ್ತುಗಳನ್ನು ಸೇವಿಸುತ್ತಾನೆ. ಪಂದ್ಯಾಟಗಳಲ್ಲಿ ಭಾಗವಹಿಸುತ್ತಾನೆ. ಪಾನಮಂದಿರಗಳ ಸಹವಾಸಕ್ಕೆ ಬೀಳುತ್ತಾನೆ. ಇಂತಹ ವ್ಯಕ್ತಿಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ನರದೌರ್ಬಲ್ಯ, ಹೃದ್ರೋಗ ಸಮಸ್ಯೆಗಳು, ಮಾನಸಿಕ ಅಸ್ಥಿರತೆ ಇವೇ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ.
ಇಷ್ಟೆಲ್ಲ ಪೀಠಿಕೆ ಏಕೆಂದರೆ, ಉತ್ತಮ ಯೋಗ ಶಿಕ್ಷಣದಿಂದ ಜೀವನದ ಮಾರ್ಗವೇ ಬದಲಾವಣೆ ಆಗುತ್ತದೆ. ಬದುಕಿನಲ್ಲಿ ಶಿಸ್ತು-ಸಂಯಮ ಮೂಡುತ್ತದೆ. ತಾಳ್ಮೆ ಪಾಲನೆಗೆ ಉತ್ತಮ ತಳಹದಿ ಹಾಕಿದಂತಾಗುತ್ತದೆ, ಗುಣ ಸಂವರ್ಧನೆಯಾಗುತ್ತದೆ. ಮಾನಸಿಕ ಅಸ್ಥಿರತೆ ನಿವಾರಣೆಯಾಗುತ್ತದೆ, ದೇಹಾರೋಗ್ಯ ಸುಧಾರಣೆಯಾಗುತ್ತದೆ ಹಾಗೂ ಜೀವನದಲ್ಲಿ ಹೊಸಬೆಳಕು ಮೂಡುತ್ತದೆ.

ಯೋಗ ಶಿಕ್ಷಣವು ಜೀವನವನ್ನು ಪರಿಶುದ್ಧಗೊಳಿಸಲು ನಿಸರ್ಗದತ್ತವಾಗಿ ಲಭ್ಯವಿರುವ ಏಕೈಕ ಮಾರ್ಗವೆಂದರೆ ತಪ್ಪಾಗಲಾರದು. ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಬಲ್ಲ ಶ್ರೇಷ್ಠ ಚಿಕಿತ್ಸಾ ವಿಧಾನವೆಂದು ಪರಿಗಣಿಸಲ್ಪಟ್ಟಿದೆ. ಯೋಗ ಶಿಕ್ಷಣಕ್ಕೆ ಶ್ರದ್ದೆ ಬಹಳ ಮುಖ್ಯ. ಆ ಶಿಕ್ಷಣದಿಂದ ತಮಗೆ ತುಂಬಾ ಪ್ರಯೋಜನವಾಗುತ್ತದೆ ಎಂಬ ನಂಬಿಕೆ ಇಟ್ಟರೆ ಶ್ರದ್ದೆ ತಾನಾಗಿಯೇ ಬರುತ್ತದೆ. ಗುರುವಿನ ಮಾರ್ಗದರ್ಶನ ಯೋಗ ಶಿಕ್ಷಣಕ್ಕೆ ಅತ್ಯಗತ್ಯ.

ಗುರುವು ಯೋಗಸಾಧನೆಯಿಂದ ಪಡೆದ ಲಾಭವನ್ನು ಶಿಕ್ಷಣಾರ್ಥಿಯು ಪ್ರತ್ಯಕ್ಷಾನುಭವದಿಂದ ತಿಳಿಯಬಹುದಾದ ಕಾರಣ, ಯೋಗಶಿಕ್ಷಣದಲ್ಲಿ ಶಿಕ್ಷಣಾರ್ಥಿಗೆ ಸಂಶಯ-ಅನುಮಾನಗಳು ಉಂಟಾಗುವುದಿಲ್ಲ. ಪ್ರಯೋಗಶೀಲ ಯೋಗಶಿಕ್ಷಣವನ್ನು ಪ್ರಾರಂಭ ಮಾಡಿದ ನಂತರ, ಅಲ್ಪಾವಧಿಯಲ್ಲೇ ಆ ಶಿಕ್ಷಣದ ಮಹತ್ವವು ಶಿಕ್ಷಣಾರ್ಥಿಯ ಅನುಭವಕ್ಕೂ ಬರುತ್ತದೆ. ಆದುದರಿಂದ, ಯೋಗಶಿಕ್ಷಣದಲ್ಲಿ ಆತನಿಗೆ ಅಪಾರ ನಂಬಿಕೆ ಹುಟ್ಟುವುದು ಸಹಜ. ಸ್ವಾನುಭವದಿಂದ ಗಳಿಸಿದ ವಿದ್ಯೆ ಜೀವನ ಪರ್ಯಂತ ಉಪಯುಕ್ತ ಫಲ ನೀಡುತ್ತದೆ. ಆ ಫಲ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂಬುದು ನಿತ್ಯಸತ್ಯ.

ಯೋಗ ಶಿಕ್ಷಣಕ್ಕೆ ಜಾತಿಮತಗಳ ಭೇದವಿಲ್ಲ. ಸ್ತ್ರೀ- ಪುರುಷನೆಂಬ ತಾರತಮ್ಯವಿಲ್ಲ. ವಯಸ್ಸಿನ ಮಿತಿಯಿಲ್ಲ. ದೇಹವು ಆರೋಗ್ಯ ಸ್ಥಿತಿಯಲ್ಲೇ ಇರಬೇಕೆಂಬ ನಿಯಮವಿಲ್ಲ. ಹಣ ಖರ್ಚಾಗುತ್ತದೆಂಬ ಭಯವಿಲ್ಲ. ಮಕ್ಕಳು, ವಿದ್ಯಾರ್ಥಿಗಳು, ಗೃಹಿಣಿಯರು, ಶ್ರಮಜೀವಿಗಳು, ಬುದ್ದಿಜೀವಿಗಳು, ಉದ್ಯಮಿಗಳು ಇವರೇ ಮೊದಲಾದ ಎಲ್ಲ ವಯಸ್ಸಿನ ಹಾಗೂ ಎಲ್ಲ ಅಂತಸ್ತಿನ ಜನರೂ ಯೋಗ ಶಿಕ್ಷಣದ ಲಾಭ ಪಡೆದು ಸು:ಖ ಶಾಂತಿಯಿಂದ ಕೂಡಿದ ಜೀವನ ನಡೆಸಬಹುದು.

ರೋಗ ನಿವಾರಕ ಯೋಗ
ಯೋಗ ಎಂದರೆ ಸಾಧಿಸಲಾಗದ್ದನ್ನು ಸಾಧಿಸುವುದು, ಕಡಿವಾಣ ತೊಡಿಸಿ ಕುದುರೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಂತೆ ಇಂದ್ರಿಯಗಳನ್ನು ನಿಯಂತ್ರಣದಲ್ಲಿಡುವುದು. ಮಾನಸಿಕ ಏಕಾಗ್ರತೆಯನ್ನು ಸಾಧಿಸುವುದು, ಜೀವಾತ್ಮವನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವುದು ಎಂದೆಲ್ಲ ಅರ್ಥೈಸಿಬಹುದು. ಆದರೂ, ಚಂಚಲವಾದ ಮನಸ್ಸನ್ನು ಒಂದೆಡೆ ನಿಲ್ಲಿಸುವುದೇ ಯೋಗ ಎಂಬುದು ಸರ್ವಸಮ್ಮತ ಅಭಿಪ್ರಾಯ. ಮನಸ್ಸನ್ನು ಶಿಸ್ತಿಗೆ ಒಳಪಡಿಸುವುದು ಯೋಗ. ಶರೀರ ಮತ್ತು ಮನಸ್ಸು – ಇವುಗಳ ಹೊಂದಾಣಿಕೆ ಯೋಗಾಭ್ಯಾಸದಿಂದ ಸಾಧ್ಯ. ಚಿತ್ತಶುದ್ಧಿಯನ್ನು ಯೋಗಾಭ್ಯಾಸದಿಂದ ಪಡೆಯಬಹುದು. ಚಿತ್ತವನ್ನು ಗುರಿಯತ್ತ ನಿರ್ದೇಶಿಸಿ ಕೇಂದ್ರೀಕರಿಸುವ ಸಾಮಥ್ರ್ಯವೇ ಯೋಗ. ಯೋಗ ಸಾಧನೆಯಿಂದ ಬುದ್ದಿ ಚಾಂಚಲ್ಯವನ್ನು, ಹತೋಟಿಯಲ್ಲಿ ಇರಿಸಬಹುದು ; ನೋವು ಮತ್ತು ದು:ಖದಿಂದ ದೂರವಿರಬಹುದು. ಆದುದರಿಂದ, ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಬೇಕಾದರೆ, ನಿತ್ಯಾನಂದ ಪ್ರಾಪ್ತಿಯಾಗಬೇಕಾದರೆ, ರೋಗರುಜಿನಗಳಿಂದ ಮುಕ್ತಿ ಪಡೆಯಬೇಕಾದರೆ, ಯೋಗ ಮಾರ್ಗವು ಅತ್ಯುತ್ತಮವಾದುದು.

ಯೋಗ ಮಾರ್ಗದ ಅವಲಂಬಿಯಾಗಬೇಕಾದರೆ, ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಯೋಗವು ಗುರು ಮೂಲಕವೇ ಅಭ್ಯಾಸ ಮಾಡಬೇಕಾದ ತಾತ್ವಿಕ ಹಾಗೂ ಪ್ರಾಯೋಗಿಕ ವಿಜಾ್ಞನ, ಪೂರ್ಣ ಅನುಭವವುಳ್ಳ ಗುರವಿನ ಮಾರ್ಗದರ್ಶನವಿಲ್ಲದ ಯೋಗಾಭ್ಯಾಸ ಫಲಕಾರಿಯಾಗಲಾರದು. ಗುರುವಿನಿಂದ ಸ್ವೀಕರಿಸಲಾಗುವ ಯೋಗವಿದ್ಯೆಯಿಂದ ಎಡರುತೊಡರುಗಳು ನಿವಾರಣೆಯಾಗುತ್ತವೆ. ಯೋಗಾಭ್ಯಾಸವು ಪೂರ್ಣವಾಯಿತೆಂದು ಹೇಳುವುದು ಕಷ್ಟಸಾಧ್ಯ. ಇದಕ್ಕೆ ಕಲಿಕೆಯ ಕಾಲದ ಅವಧಿ ಇಷ್ಟು ಎಂದು ನಿರ್ದಿಷ್ಟವಾಗಿ ಹೇಳುವಂತಿಲ್ಲ. ಇದು ಜೀವನದುದ್ದಕ್ಕೂ ಶ್ರದ್ಧೆಯಿಂದ ಮಾಡುವ ಸಾಧನೆಯೇ ಆಗಿದೆ. ನಿರಂತರ ಯೋಗ ಸಾಧನೆಯಿಂದ ಶಾಶ್ವತ ಸುಖ ಮತ್ತು ಶಾಂತಿ ಪ್ರಾಪ್ತವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

Facebook Comments

Sri Raghav

Admin