ಬೆಂಗಳೂರಿನಲ್ಲಿ ಇಂದಿನಿಂದ 10 ದಿನ ಚಿಕೆತ್ಸೆ ಪಡೆಯಲಿದ್ದಾರೆ ದೆಹಲಿ ಸಿಎಂ ಕೇಜ್ರಿವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Arvind--01

ಬೆಂಗಳೂರು, ಜೂ.21- ತೀವ್ರ ರಕ್ತದೊತ್ತಡಕ್ಕೆ ಸಿಲುಕಿ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದಿನಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ತುಮಕೂರು ರಸ್ತೆಯ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಒಟ್ಟು ಹತ್ತು ದಿನಗಳ ಕಾಲ ಚಿಕಿತ್ಸೆ ಪಡೆಯಲಿರುವ ಕೇಜ್ರಿವಾಲ್ ತಮ್ಮ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ.  ಕೇಜ್ರಿವಾಲ್ ಜತೆ ಅವರ ಪತ್ನಿ ಹಾಗೂ ಕುಟುಂಬದ ಕೆಲವರು ಮಾತ್ರ ಆಗಮಿಸಲಿದ್ದು, ದೆಹಲಿಯ ಆಡಳಿತ ಚುಕ್ಕಾಣಿಯನ್ನು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿರ್ವಹಿಸಲಿದ್ದಾರೆ.

ಕಳೆದ ಒಂದು ವಾರದಿಂದ ಅರವಿಂದ್ ಕೇಜ್ರಿವಾಲ್ ಹಾಗೂ ಸಂಪುಟದ ಕೆಲವು ಸಚಿವರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ದೆಹಲಿಯ ಲೆಫ್ಟಿನೆಂಟ್ ಗೌರ್ನಜನರಲ್ ಅನಿಲ್ ಭೈಜಾಲ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದರು. ದೆಹಲಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಹಾಗೂ ಇಲ್ಲಿನ ನಿವಾಸಿಗಳಿಗೆ ನೇರವಾಗಿಯೇ ಪಡಿತರ ಧಾನ್ಯಗಳನ್ನು ಅವರ ಮನೆಗಳಿಗೆ ತಲುಪಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೆ, ಇದಕ್ಕೆ ಅನಿಲ್ ಭೈಜಾಲ್ ಸೊಪ್ಪು ಹಾಕಿರಲಿಲ್ಲ. ಇದು ಆಪ್ ಮತ್ತು ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.

ನಿರಂತರವಾಗಿ ಧರಣಿ ನಡೆಸಿದ್ದರಿಂದ ರಕ್ತದೊತ್ತಡ ಹೆಚ್ಚಾಗಿರುವ ಕಾರಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಕೇಜ್ರಿವಾಲ್ ಅವರಿಗೆ ಸಲಹೆ ಮಾಡಿದ್ದರು. ಈ ಹಿಂದೆ ಅವರು ಕೆಮ್ಮಿನ ತೊಂದರೆಯಿಂದ ಬಳಲುತ್ತಿದ್ದ ವೇಳೆ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುವಂತೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಸಲಹೆ ಮಾಡಿದ್ದರು. ಸುಮಾರು ಒಂದು ವಾರಗಳ ಕಾಲ ಕೇಜ್ರಿವಾಲ್ ಚಿಕಿತ್ಸೆ ಪಡೆದಿದ್ದರು. ಪುನಃ ಉದ್ಯಾನನಗರಿಯಲ್ಲಿ ಚಿಕಿತ್ಸೆ ಪಡೆಯಲು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ.

Facebook Comments

Sri Raghav

Admin