ಮೇಲ್ಮನೆ ಸಭಾಪತಿ ಸ್ಥಾನಕ್ಕಾಗಿ ಹೊರಟ್ಟಿ-ಪಾಟೀಲ್ ನಡುವೆ ಹಗ್ಗಜಗ್ಗಾಟ

ಈ ಸುದ್ದಿಯನ್ನು ಶೇರ್ ಮಾಡಿ

Basavaraj-Horatti-S-R-Patil
ಬೆಂಗಳೂರು, ಜೂ.21-ಸಚಿವ ಸಂಪುಟ ವಿಸ್ತರಣೆ ನಂತರ ಉಂಟಾದ ಬಂಡಾಯ, ಖಾತೆ ಹಂಚಿಕೆ ಅಸಮಾಧಾನ, ಗೊಂದಲ ಇನ್ನೂ ಬಗೆಹರಿಯದಿರುವ ಬೆನ್ನಲ್ಲೇ ದೋಸ್ತಿ ಸರ್ಕಾರದಲ್ಲಿ ಮೇಲ್ಮನೆ ಸಭಾಪತಿ ಸ್ಥಾನಕ್ಕೆ ಕುಸ್ತಿ ಶುರುವಾಗಿದೆ. ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಒಪ್ಪಂದದಂತೆ ಮೇಲ್ಮನೆ ಸಭಾಪತಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕಿತ್ತು. ಆದರೆ, ಕಾಂಗ್ರೆಸ್ ಈಗ ಹೊಸ ರಾಗ ತೆಗೆದಂತಿದೆ ಎಂದು ತಿಳಿದು ಬಂದಿದೆ.

ಮೇಲ್ಮನೆ ಸಭಾಪತಿ ಸ್ಥಾನವನ್ನು ಜೆಡಿಎಸ್ ಮುಖಂಡ, ಮೇಲ್ಮನೆಯ ಹಿರಿಯ ನಾಯಕ ಬಸವರಾಜ ಹೊರಟ್ಟಿಯವರಿಗೆ ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಹಾಲಿ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ಅವಧಿ ಇಂದಿಗೆ ಕೊನೆಯಾದ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿಯಾಗಿ ಬಸವರಾಜಹೊರಟ್ಟಿ ಅವರನ್ನು ರಾಜ್ಯಪಾಲ ವಿ.ಆರ್.ವಾಲಾ ಅವರು ನೇಮಕ ಮಾಡಿದ್ದರು.  ಮೇಲ್ಮನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಕುದುರಿ ಹೊರಟ್ಟಿಯವರು ಸಭಾಪತಿಯಾಗಬೇಕಿತ್ತು. ಆದರೆ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಸಭಾಪತಿ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಬೇಕೆಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಅಲ್ಲದೆ, ಉತ್ತರ ಕರ್ನಾಟಕದ ಕಾಂಗ್ರೆಸ್‍ನ ಪ್ರಭಾವಿ ಲಿಂಗಾಯಿತ ಮುಂಖಡರಾದ ಎಸ್.ಆರ್.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಸಿಗಲಿಲ್ಲ. ಸಚಿವ ಸಂಪುಟದಲ್ಲೂ ಸ್ಥಾನ ಸಿಗಲಿಲ್ಲ. ಹಾಗಾಗಿ ಅವರನ್ನು ಸಭಾಪತಿಯನ್ನಾದರು ಮಾಡುವ ಅಗತ್ಯವಿದೆ. ಅಲ್ಲದೆ, ಬಾದಾಮಿ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಿದ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕಾಗಿದೆ ಎಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಮೇಲ್ಮನೆ ಸಭಾಪತಿ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಒಪ್ಪಿಲ್ಲ.

ಸಚಿವ ಸ್ಥಾನದ ಪ್ರಬಲ ಆಕಾಕ್ಷಿಯಾಗಿದ್ದ ಬಸವರಾಜಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ವಹಿಸಿಕೊಳ್ಳಲು ಬಿಲ್‍ಕುಲ್ ಇಷ್ಟವಿರಲಿಲ್ಲ. ಸಚಿವ ಸ್ಥಾನ ನೀಡಿದರೆ ಕಾರ್ಯನಿರ್ವಹಿಸುತ್ತೇನೆ, ಇಲ್ಲವಾದರೆ ಸದಸ್ಯನಾಗಿ ಮುಂದುವರೆಯುತ್ತೇನೆ ಎಂದು ಖಂಡತುಂಡವಾಗಿ ಹೇಳಿದ್ದರು. ಆದರೆ, ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡಲು ಸಾಧ್ಯವಾಗಿರಲಿಲ್ಲ. ಜೆಡಿಎಸ್ ಸದಸ್ಯರು ಮತ್ತು ಮುಖಂಡರು ಸಭಾಪತಿ ಸ್ಥಾನ ನಿರ್ವಹಿಸುವಂತೆ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನೇನು ಅವರು ಅವಿರೋಧವಾಗಿ ಆಯ್ಕೆಯಾಗಬೇಕು. ಆದರೆ, ಈಗ ಮೈತ್ರಿ ಸರ್ಕಾರದಲ್ಲಿ ಹೊಸ ತಕರಾರು ಶುರುವಾಗಿದೆ. ಮೇಲ್ಮನೆ ಸಭಾಪತಿ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ಅವರ ಹೆಸರು ಕೇಳಿ ಬಂದಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಸ್ಥಾನ, ಉಪ ಸಭಾಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಅದೇ ರೀತಿ ಮೇಲ್ಮನೆಯಲ್ಲಿ ಸಭಾಪತಿ ಸ್ಥಾನ ಜೆಡಿಎಸ್‍ಗೆ ಹಾಗೂ ಉಪಸಭಾಪತಿ ಸ್ಥಾನ ಕಾಂಗ್ರೆಸ್‍ಗೆ ಎಂದು ಮಾತುಕತೆಯಾಗಿತ್ತು. ಈಗ ಕಾಂಗ್ರೆಸ್ ಕೂಡ ಸಭಾಪತಿ ಸ್ಥಾನದ ಬೇಡಿಕೆ ಇಟ್ಟಿರುವುದರಿಂದ ಅಂತಿಮವಾಗಿ ಈ ವಿಚಾರ ಹೈಕಮಾಂಡ್ ಅಂಗಳ ತಲುಪುವ ಸಾಧ್ಯತೆ ಇದೆ.

Facebook Comments

Sri Raghav

Admin