ಅನಗತ್ಯ ದುಂದುವೆಚ್ಚಗಳಿಗೆ ಸಿಎಂ ಬ್ರೇಕ್ : ಸಚಿವರ ಕಾರು, ಮನೆಗಳ ನವೀಕರಣಕ್ಕೂ ಕತ್ತರಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-n-01

ಬೆಂಗಳೂರು ,ಜೂ.21- ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಆರ್ಥಿಕ ಶಿಸ್ತಿಗೆ ಒತ್ತು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಯಾವುದೇ ಸಚಿವರು ಹೊಸ ಕಾರು ಹಾಗೂ ತಮ್ಮ ಮನೆಗಳ ನವೀಕರಣ ಮಾಡಿಸಿಕೊಳ್ಳದಂತೆ ಸೂಚಿಸಿದ್ದಾರೆ.ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಕಾರ್ಯದರ್ಶಿಗೆ ಮೌಖಿಕ ಸೂಚನೆ ನೀಡಿರುವ ಅವರು, ಸಚಿವರ ಸರ್ಕಾರಿ ನಿವಾಸಗಳ ನವೀಕರಣಕ್ಕೆ ಮತ್ತು ಹೊಸ ಕಾರುಗಳ ಖರೀದಿಗೆ ಪತ್ರ ಬಂದರೆ ಮಾನ್ಯ ಮಾಡದಂತೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಸಂಪುಟದಲ್ಲಿ ಒಟ್ಟು 27 ಮಂದಿ ಸಹೋದ್ಯೋಗಿಗಳಿದ್ದಾರೆ. ಪ್ರತಿಯೊಬ್ಬರಿಗೂ ಟಯೋಟೊ ಕ್ರೈಸ್ಟ ಹಾಗೂ ಫಾಚ್ರ್ಯೂನ್ ಕಾರು ಖರೀದಿ ಮಾಡಲು ಕನಿಷ್ಟ ಒಂದು ವಾಹನಕ್ಕೆ 25ರಿಂದ 30 ಲಕ್ಷ ಬೇಕಾಗುತ್ತದೆ. ಎಲ್ಲ ಸಚಿವರಿಗೆ ಹೊಸ ವಾಹನಗಳನ್ನೇ ಖರೀದಿ ಮಾಡಬೇಕೆಂದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸರಿಸುಮಾರು 18ರಿಂದ 20 ಕೋಟಿ ವೆಚ್ಚ ತಗಲುತ್ತದೆ.

ಹೊಸ ಸರ್ಕಾರ ಬಂದ ಸಂದರ್ಭದಲ್ಲಿ ಸಚಿವರು ಸಾಮಾನ್ಯವಾಗಿ ಹಳೇ ವಾಹನಗಳನ್ನು ಬಳಸದೆ ಹೊಸ ಕಾರುಗಳ ಮೇಲೆ ಕಣ್ಣಿಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.   ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತಮ್ಮ ತಮ್ಮ ಗಾಡ್ ಫಾದರ್‍ಗಳ ಮೇಲೆ ಒತ್ತಡ ಹಾಕಿ ವಾಹನ ಖರೀದಿ ಮಾಡುವುದು ಹಾಗೂ ತಮಗೆ ಇಷ್ಟ ಬಂದ ಕಡೆಯೇ ಮನೆ ಪಡೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಈ ಬಾರಿ ಇದಕ್ಕೆಲ್ಲಾ ಅಂತ್ಯ ಹಾಡಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಹೊಸ ವಾಹನಗಳ ಖರೀದಿಗೆ ಬ್ರೇಕ್ ಹಾಕಿದ್ದಾರೆ.

ಸಚಿವರಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಪ್ರಿಯಾಂಕ ಖರ್ಗೆ, ಯು.ಟಿ.ಖಾದರ್, ಶಿವಾನಂದ ಪಾಟೀಲ್, ರಾಜಶೇಖರ ಪಾಟೀಲ್ ಹುಮ್ನಾಬಾದ್, ಜಯಮಾಲ, ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರು ಹೊಸ ಕಾರುಗಳಿಗೆ ಬೇಡಿಕೆ ಇಟ್ಟಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಕೂಡ ವಾಹನಗಳ ಖರೀದಿಗೆ ಸಿದ್ಧತೆ ಮಾಡಿಕೊಂಡಿದ್ದರು.

ಆದರೆ ಸ್ವಯಂ ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿಕೊಂಡಿರುವ ಕುಮಾರಸ್ವಾಮಿ ಅವರು, ಈಗಾಗಲೇ ಇತರರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಮೇಲೆ ತಾನು ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ವಿಶೇಷ ವಿಮಾನ ಬಳಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಮಾತಿಗೆ ತಕ್ಕಂತೆ ನಡೆದುಕೊಂಡಿರುವ ಮುಖ್ಯಮಂತ್ರಿಗಳು, ಎರಡು ಬಾರಿ ದೆಹಲಿಗೆ ಹೋದರೂ ಸಾಮಾನ್ಯರಂತೆ ಪ್ರಯಾಣಿಸಿದ್ದಾರೆ.  ಈಗ ಇದೇ ಮಾದರಿಯನ್ನು ತಮ್ಮ ಸಂಪುಟದ ಸಹೋದ್ಯೋಗಿಗಳು ಅನುಸರಿಸಬೇಕೆಂದು ಸೂಚಿಸಿರುವ ಕುಮಾರಸ್ವಾಮಿ ಅವರು, ಸಚಿವರ ಹೊಸ ಕಾರುಗಳ ಖರೀದಿ ಹಾಗೂ ಮನೆಗಳ ನವೀಕರಣಕ್ಕೆ ಕತ್ತರಿ ಹಾಕಿದ್ದಾರೆ.

ನವೀಕರಣವೂ ಬೇಡ:
ಇನ್ನು ಸಂಪುಟಕ್ಕೆ ಸೇರ್ಪಡೆಯಾದ ನಂತರ ಸಚಿವರು ಮನೆಗಳನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ನವೀಕರಣ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.  ತಮಗೆ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಸಿಕೊಳ್ಳುವುದು, ವಾಸ್ತು ಬದಲಾವಣೆ, ಹೊಸ ಪೀಠೋಪಕರಣಗಳ ಖರೀದಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು ಬೊಕ್ಕಸಕ್ಕೆ ನೂರಾರು ಕೋಟಿ ಹೊರೆ ಮಾಡುತ್ತಾರೆ. ಇವೆಲ್ಲಕ್ಕೂ ಈ ಬಾರಿ ಕುಮಾರಸ್ವಾಮಿ ಕಡಿವಾಣ ಹಾಕಿದ್ದಾರೆ.

ಕಾರಣವೇನು:
ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಬ್ಯಾಂಕ್‍ನಿಂದ ರೈತರು ಪಡೆದ ಸಾಲವನ್ನು ಮನ್ನಾ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಸರ್ಕಾರದ ದುಂದುವೆಚ್ಚಕ್ಕೆ ಕಡಿವಾಣ ಆರ್ಥಿಕ ಶಿಸ್ತಿಗೆ ಗಮನಹರಿಸಿದ್ದಾರೆ.

Facebook Comments

Sri Raghav

Admin